ಪುಟ:Duurada Nakshhatra.pdf/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಚಾಮರಾಜನಗರದ ಮಾಧ್ಯಮಿಕ ಶಾಲೆಯ ಮುಖೋಪಾಧ್ಯಾಯರಾದ ಎನ್.ವೆಂಕಟರಾಯರನ್ನು ಆ ಊರಿನ ಮಾಧ್ಯಮಿಕ ಶಾಲೆಯ ಮುಖೋಪಾಧ್ಯಾಯರಾಗಿ ವರ್ಗಾಯಿಸಲಾಗಿತ್ತು, ತಕ್ಷಣವೇ ಹೊರಟು ರಂಗರಾಯರನ್ನು ರಿಲೀವ್' ಮಾಡಬೇಕೆಂಬ ಸೂಚನೆಯಿತ್ತು ಅದರಲ್ಲಿ. ಇನ್ನೊಂದು ಹಾಳೆ ರಂಗರಾಯರನ್ನು ಸಂಬೋಧಿಸಿದ್ದ ವರ್ಗದ ಆಜ್ಞೆಯ ಪ್ರತಿ, ಮುನ್ನೂರು ಮೈಲುಗಳಾಚೆ ಕೊಡಗನೂರಿಗೆ ಸಾಮಾನ್ಯ ಉಪಾಧ್ಯಾಯರಾಗಿ ಅವರನ್ನು ಎತ್ತಿ ಹಾಕಿದ್ದರು.

ಹೃದಯ ಹಿಸುಕಿದಂತಾಗಿ ನೋವಿನ ಕ್ರೋಧದ ಭಾವನೆಗಳು ಮುಖದತ್ತ ಧಾವಿಸಿದರೂ ನಿರ್ವಿಕಾರ ಚಿತ್ತದ ಮುಖವಾಡ ಧರಿಸಲೆತ್ನಿಸುತ್ತಾ, ಬಿಮ್ಮನೆ ತುಟಿ ಬಿಗಿದುಕೊಂಡು ರಂಗರಾಯರು ಮತ್ತೊಮ್ಮೆ ಎರಡೂ ಆಜ್ಞೆಗಳನ್ನೋದಿದರು. ಓದಿದ ಬಳಿಕ ಹಾಳೆಗಳನ್ನು ನಂಜುಂಡಯ್ಯನಿಗೆ ಕೊಟ್ಟರು. ಅವರ ಪಕ್ಕದಲ್ಲೇ ಕುಳಿತಿದ್ದ ಜಯದೇವನೂ ಅದನ್ನೋದಿದ. ನಂಜುಂಡಯ್ಯನಿಗೆ ತೃಪ್ತಿಯಾಯಿತು, ಅತೃಪ್ತಿಯಾಯಿತು ತೃಪ್ತಿ — ಶಂಕರಪ್ಪನ ಪ್ರಭಾವ ಪರಿಣಾಮಕಾರಿಯಾಯಿತೆಂದು, ಅತೃಪ್ತಿ–ಮುಖ್ಯೋಪಾಧ್ಯಾಯನಾಗುವ ತಮ್ಮ ಬಯಕೆ ಫಲಿಸಲಿಲ್ಲವೆಂದು. ಆದರೂ ಅವರು ಮುಗುಳ್ನಗಲೂ ಇಲ್ಲ; ಅಸಮಾಧಾನವನ್ನು ತೋರಿಸಲೂ ಇಲ್ಲ, ಜಯದೇವನಿಗೆ ಮಾತ್ರ ಈ ಪರಿಸ್ಮಿತಿ ಕ್ರೂರವಾಗಿ ವಿಚಿತ್ರವಾಗಿ ತೋರಿತು.

ನಂಜುಂಡಯ್ಯ ಆ ಹಾಳೆಗಳನ್ನು ಮೇಜಿನ ಮೇಲಿಡುತ್ತಿದ್ದಂತೆ ರಂಗರಾಯರೆಂದರು :

“ನನಗಿನ್ನೂ ಅನುಜ್ಞೆ ಬಂದಿಲ್ಲ.”

ತಾವು ತಂದ ಆಜ್ಞಾಪತ್ರದ ಪ್ರಭಾವವನ್ನು ತೂಗಿನೋಢಲು ಅಪೇಕ್ಷಿಸಿ, ಮೂವರನ್ನೂ ನೆಟ್ಟದೃಷ್ಟಿಯಿಂದಲೇ ನೋಡುತಿದ್ದ ವೆಂಕಟರಾಯರು ವ್ಯಕ್ತಪಡಿಸಿದ ಪ್ರತಿಕ್ರಿಯೆಯೊಂದೇ;

“ಐ ಸೀ”

“ಬೇರೆ ಜಿಲ್ಲೆಯಿಂದ್ಲೇ ನೀವು ಬಂದಹಾಗಾಯ್ತು,”

"ಹೂಂ"

“ಸಂಸ್ಥಾನದ ವಿದ್ಯಾಧಿಕಾರಿಯ ಕಚೇರಿಯಿಂದ್ಲೇ ಆಜ್ಞೆ ಹೊರಟಿದೆ.

“ಹೌದು. ವಿಷಯವೇ ಅಂಥಾದ್ದು.”