ಪುಟ:Duurada Nakshhatra.pdf/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

“ಓಹೊ ! ವಿಷಯ ತಮಗೂ ಗೊತ್ತಿದೆ ಹಾಗಾದರೆ.”

“ಹೋದ ಬೇಸಗೇಲಿ ಬೆಂಗಳೂರಿಗೆ ಹೋಗಿದ್ದೆ, ಅಲ್ಲಿ ತಿಳೀತು.”

“ಜಿಲ್ಲಾ ವಿದ್ಯಾಧಿಕಾರಿಯೂ ಸಹಿ ಮಾಡಿದಾರೆ, ಅಲ್ವೆ?”

“ಹೂ೦."

ಮತ್ತೆ ಮೌನ ನೆಲೆಸಿತು.

*ಚಾರ್ಜ್ ಯಾವತ್ತು ತಗೋತೀರ?” ಎಂದು ರಂಗರಾಯರು ಕೇಳಿದರು.

“ಈ ಕ್ಷಣವೇ ತಗೋಳೋಣ ಅಂತಿದ್ರೂ ನಿಮಗೆ ಇನ್ನೂ ಆಜ್ಞೆಯೇ ಬಂದಿಲ್ವಲ್ಲಾ !”

“ಪರವಾಗಿಲ್ಲ, ಪೋಸ್ಟಿನಲ್ಲಿ ಇವತ್ತೇನೋ ಬಂದಿಲ್ಲ; ಆದರೆ ನಾಳೆ ಬರಬಹುದು.."

ಒಮ್ಮೆಲೆ ಒಂದು ವಿಚಾರ ರಂಗರಾಯರಿಗೆ ಹೊಳೆಯಿತು. ವರ್ಗದ ವಿಷಯ ಮುಂಚಿತವಾಗಿ ತನಗೆ ತಿಳಿಯಬಾರದೆಂದೇ ಆಜ್ಞಾಪತ್ರವನ್ನು ಬೇಗನೆ ಕಳುಹಿಸದೆ ಇರಬಹುದೆ? ಹಾಗೂ ಇರಬಹುದೆ?

ವೆಂಕಟರಾಯರು ಮಾತ್ರ ಹಾಗೆ ಆ ಕ್ಷಣವೆ ಚಾರ್ಜ್ ವಹಿಸಿಕೊಳ್ಳಲು ಸಿದ್ಧರಿರಲಿಲ್ಲ.

“ಅದು ಹ್ಯಾಗೆ ಸಾಧ್ಯ? ನಿಮಗೂ ಆಜ್ಞೆ ಬರೋವರೆಗೆ ಕಾದಿರ್ತೀನಿ.”

ರಂಗರಾಯರೆದ್ದು ಕಿಟಕಿಯ ಬಳಿ ನಿಂತು ಸ್ವಲ್ಪ ಹೊತ್ತು ಶೂನ್ಯ ನೋಟ ಬೀರಿದರು. ಅದೇ ಆಗ ನಿಂತಿದ್ದ ಮಳೆ ಮತ್ತೆ ಬರುವ ಸೂಚನೆಗಳಿದ್ದುವು. ಬೆಳಗು ಮುಂಜಾವವೊ ಮುಚ್ಚಂಜೆಯೊ ಎಂದು ಸಂದೇಹ. ಬರುವ ಹಾಗೆ ಮೋಡ ದಟ್ಟನೆ ಕವಿದು ಬೆಳಕು ಮಾಯವಾಗಿತು.

ಅದು ಅಸಹನೀಯವಾದ ಮೌನ.. ಸಿಗರೇಟನ್ನಾದರೂ ನಂಜುಂಡಯ್ಯ ಸೇದಬಾರದೆ-ಎಂದುಕೊಂಡ ಜಯದೇವ, ಅವರು ಯಾಕೋ ಸಿಗರೇಟನ್ನು ಹೊರತೆಗೆಯಲೇ ಇಲ್ಲ. ದೃಷ್ಟಿಯನ್ನು ಕಿರಿದುಗೊಳಿಸಿ ಹೊಸ ಮುಖ್ಯೋಪಾಧ್ಯಾಯರನ್ನು ಪರೀಕ್ಷಿಸುತ್ತ ಜಯದೇವ ಕುಳಿತ.

ರಂಗರಾಯರು ಮತ್ತೆ ವೆಂಕಟರಾಯರತ್ತ ಮುಖ ತಿರುಗಿಸಿ ಹೇಳಿದರು:

“ಕ್ಷಮಿಸಿ. ನಿಮಗೆ ನಿಮ್ಮ ಸಹೋದ್ಯೋಗಿಗಳ ಪರಿಚಯ ನಾನು ಮಾಡಿಕೊಡಲೇ ಇಲ್ಲ.”