ಪುಟ:Duurada Nakshhatra.pdf/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ತಮಗಷ್ಟೇ ಕೇಳಿಸುವ ಹಾಗೆ 'ಹೂಂ' ಎನ್ನುತ್ತ ರಂಗರಾಯರು ಹೊರಟು ಹೋದರು. ಜಯದೇವನನ್ನು ಶಾಲೆಯಲ್ಲೆ ಬಿಟ್ಟು ನಂಜುಂಡಯ್ಯ ವೆಂಕಟರಾಯರೊಡನೆ ಹೋಟೆಲಿಗೆ ನಡೆದರು.

ಜಯದೇವ ಕಾಫಿ ತರಿಸಿ ಕುಡಿಯಲಿಲ್ಲ. ಅವನಿಗೆ ಏನೂ ಬೇಡವಾಗಿತ್ತು.

ಹೀಗಾಗುವುದೆಂದು ಆತ ನಿರೀಕ್ಷಿಸಿರಲಿಲ್ಲ. ಯಾರು ಸರಿ? ಯಾರು ತಪ್ಪು! ತಾನು ಉಪಾಧ್ಯಾಯನಾಗಿ ಬಂದಾಗ ತನಗೆ ಮುಗುಳ್ನಗೆಯ ಸ್ವಾಗತ ನೀಡಿದ ಮುಖ್ಯೋಪಾಧ್ಯಾಯ ರಂಗರಾಯರ ಮೇಲೆ ಆರೋಪಗಳು.... ಯೋಗ್ಯರೀತಿಯಲ್ಲಿ ವಿಚಾರಣೆ ನಡೆಸಲಾಗದಂತಹ ಆರೋಪಗಳು.ಅದು ರಾಜಕೀಯಕ್ಕೆ ಸಂಭಂಧಿಸಿದ್ದು. ಸ್ವತಂತ್ರ ಭಾರತ ರಾಜ್ಯಾಂಗದಲ್ಲಿ ಅಭಿಪ್ರಾಯ ಸ್ವಾತಂತ್ರ್ಯಕ್ಕೆ ಆಸ್ಪದವಿಲ್ಲವೆ ಹಾಗಾದರೆ! ಅಲ್ಲಿ ಬರೆದಿರುವುದೆಲ್ಲಾ ಕಾಗದದ ಮೇಲಿನ ತೋರಿಕೆಯ ಮಾತುಗಳೆ?.... ಜಯದೇವನಿಗೆ ಸ್ವತಃ ರಾಜಕೀಯದಲ್ಲಿ ಅಂತಹ ಆಸಕ್ತಿ ಇರಲಿಲ್ಲವಾದರೂ ಆತ ಯೋಚಿಸಿದ. ರಂಗರಾಯರು ಮತ್ತು ನಂಜುಂಡಯ್ಯನ ನಡುವಿನ ವಿರಸಕ್ಕೆ ಯಾವುದೋ ಸಣ್ಣ ತಪ್ಪು ತಿಳಿವಳಿಕೆಯೇ ಕಾರಣವಿರಬೇಕು. ಅದು ಬೆಳೆದು ಇಬ್ಬರನ್ನೂ ಬೇರೆ ಬೇರೆಯಾಗಿ ಎರಡು ದಿಕ್ಕುಗಳಿಗೆ ಒಯ್ದಿರಬೇಕು....

"ಕಾಫಿ ತರ್ಸೋಲ್ವೆ ಸಾರ್?"

ಆ ಪ್ರಶ್ನೆ ಕೇಳಿ ಜಯದೇವೆ ತಿರುಗಿ ನೋಡಿದ. ವಿರೂಪಾಕ್ಷ ತನ್ನ ಇಬ್ಬರೂ ಸಹಪಾಠಿಗಳೊಡನೆ ನಿಂತಿದ್ದ ಬಾಗಿಲಲ್ಲೆ.

"ಬೇಡ ವಿರೂಪಾಕ್ಷ. ಈಗೇನೂ ಬೇಡ. ಸಾಯಂಕಾಲ ಕುಡೀತೀನಿ."

ಆದರೆ ಆ ಹುಡುಗರು ಅಷ್ಟರಲ್ಲೆ ಹೊರಟು ಹೋಗುವಂತಿರಲಿಲ್ಲ.

"ಅವರು ಯಾರು ಸಾರ್ ಬಂದಿದ್ದು?"

ಒಬ್ಬ ಹಾಗೆ ಕೇಳಿದರೆ ಇನ್ನೊಬ್ಬ ಬೇರೊಂದು ಪ್ರಶ್ನೆ ಕೇಳಿದ:

"ಅವರು ಇನ್ಸ್ ಪೆಕ್ಟ್ರೆ ಸಾರ್?"

ಹೇಳಬಹುದೋ ಹೇಳಬಾರದೋ ಎಂಬ ಅನಿಶ್ಚಯತೆ ಕ್ಷಣಕಾಲ ಜಯದೇವನನ್ನು ಗೊಂದಲಕ್ಕೀಡುಮಾದಿತು. ತನ್ನಿಂದಲೇ ಈ ವಾರ್ತೆ