ಪುಟ:Ekaan'gini.pdf/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತೋರುತ್ತಿದ್ದುದು ಪೊಳ್ಳು ಬೆದರಿಕೆ ಎನ್ನಲು ಆಧಾರವೆಲ್ಲಿತ್ತು ? ಅವರಿಬ್ಬರು ಹೋಗಿಯೇ ಬಿಟ್ಟರೆ ಗತಿ ? "ನಿಲ್ಲಿ ! ನಿಲ್ಲಿ !" ಎನ್ನುತ್ತ ಪುಟ್ಟಣ್ಣ ಆ ಇಬ್ಬರ ಹಿಂದೆ ಧಾವಿಸಿದ. ಇಳಿದು ಬೀದಿ ಸೇರುತ್ತಿದ್ದವರು ಹಿಂತಿರುಗಿಯೂ ನೋಡಲಿಲ್ಲ. ' ಘಾತವಾಯಿತು, ಬಾಗಿಲು ತೆರೆದಿಟ್ಟು ಬಂದು ಮೋಸಹೋದೆ'- ಎಂದು

ಪುಟ್ಟಣ್ಣಾ ಪುನಃ ಕೊಠಡಿಯ ಕಡೆಗೆ ಓಡಿದ.

ಘಾತವಾಗಿತ್ತು ! ಸುನಂದಾ ಒಳಹೊಕ್ಕು ಮಗುವಿನೊಡನೆ ಹಾಸಿಗೆಯ ‍ ಮೇಲೆ ಕುಳಿತಿದ್ದಳು. "ಹೊರಡು, ಹೊರಡಿಲ್ಲಿಂದ!"ಎಂದು ಪುಟ್ಟಣ್ಣ ಕಿರಿಚಿದ. ಆತನ ಮುಖ ಕೆಂಪಿಟ್ಟಿತು. ತುಟಿಗಳು ಅದುರಿದುವು. ಮೈ ಬೆವತಿತು. ಆದರೆ ಆ ರೋಪಾವೇಶದ ಮುಂದೆ ಸುನಂದಾ ಬೆಚ್ಚಿಬೀಳಲಿಲ್ಲ. ಗಂಡನ ಮುಖವನ್ನೊಂದು ಕ್ಷಣ ವ್ಯಧೆ ತುಂಬಿದ ಕಣ್ಣುಗಳಿಂದ ದಿಟ್ಟಿಸಿ ,ಬಳಿಕ ನೆಲ ನೋಡುತ್ತ ಕುಳಿತಳು. ಪುಟ್ಟಣ್ಣನ ಅಂಗೈ ಮುಷ್ಟಿಯಾಯಿತು. ಸುನಂದೆಯ ಮೇಲೆ ಕೈ ಮಾಡಲು ಬಂದವನಂತೆ ಆತ ಹೆಜ್ಜೆ ಮುಂದಿರಿಸಿದ. ತಾನು ಹಿಂದೆಂದೋ ಮೂಸಿದ್ದ ಕೈಯಾಡಿಸಿದ್ದ ತಲೆ ಕೂದಲನ್ನೆ ಕೆಂಗಣ್ಣಿನಿಂದ ನೋಡುತ್ತ ಆತ ಕಿರಿಚಿದ: "ಹೊರಡೂಂತಲ್ವೆ ಅಂದಿದ್ದು? ಪಿಶಾಚಿ !" ಒಮ್ಮೆ ಆತ್ತು ಸುಮ್ಮನಾಗಿದ್ದಳು ಸರಸ್ವತಿ. ಆದರೆ ಅಮ್ಮನನ್ನು ಗದರಿಸುತಿದ್ದ ಕರ್ಕಶ ಧ್ವನಿ ಕೇಳಿ ಮತ್ತೊಮ್ಮೆ ಆಕೆ ಅಳತೊಡಗಿದಳು. ಮಗುವನ್ನು ಎತ್ತಿ ಎದೆಗವಚಿಕೊಂಡಳು ಸುನಂದಾ. ಆದರೆ ಏಳಲಿಲ್ಲ. ಅದು ಮಹಡಿಯಿದ್ದ ಕೋಮಲ ವಿಲಾಸ. ಪುಟ್ಟಣ್ಣನ ಕೊರಡಿಯಿದ್ದುದು ಮೇಲುಗಡೆ - ಒಂದು ಸಾಲಿನ ಕೊನೆಯಲ್ಲಿ. ಹೀಗಾಗಿ, ಈ ಕೂಗಾಟ ಕೇಳಿ ಮೊದಲು ಎದ್ದು ಕಿವಿಗೊಟ್ಟುದು ಒಂದು ಮಗ್ಗುಲಿನವರು ಮಾತ್ರ. ಬಳಿಕ ಮೆಲ್ಲನೆ ಸ್ವರ ಸದ್ದು, ಇತರರ ಗಮನವನ್ನೂ ಸೆಳೆದುವು.ಹೊಟೆಲಿನ ಇಬ್ಬರು ಹುಡುಗರು ಎರಡು ಸಾರೆ ಅತ್ತಿತ್ತ ಹಾದು ಹೋದರು. ಈತ ತನಗಿನ್ನು ಹೊಡೆಯಬಹುದು; ಹೇಗೂ ಸಿದ್ಧಳಾಗಿಯೇ ಬಂದಿದೀನಲ್ಲ- ಎಂದು ಯೊಚಿಸುತ್ತ ಸುನಂದಾ ತಡೆ ತಡೆದು ಉಸಿರುಬಿಟ್ಟಳು.