ಪುಟ:Ekaan'gini.pdf/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

"ನನಗೆ ಭಯವಾಗ್ತಿದೆಯಮ್ಮ ಯಾಕೋ. ಇನ್ನು ಆತ ಹಾದಿಗೆ ಬರೋದೇ ಇಲ್ಲ. ಅನ್ನಿಸುತ್ತೆ." ಹಾಗೆ ಹೇಳಿ ತಕ್ಷಣವೆ ಮುಖ ತಿರುಗಿಸಿ ಗೊಣಗಿದರು: " ಅನಿಷ್ಟ ಮಾತು. ಯಾಕಾದರೂ ಆಡ್ತೀನೋ ಹೀಗೆ" ಎಲ್ಲಿಯೋ ದೂರದಿಂದ ಕೇಳಿಸುವಂತೆ ಸುನಂದೆಯ ಸ್ವರಬಂತು "ನನಗೂ ಹಾಗೇ ಅನಿಸುತ್ತೆ ರಾಧಮ್ಮ. ಅವರ ಗುಣ ನನಗೆ ಚೆನ್ನಾಗಿ ಗೊತ್ತು. ಒಮ್ಮೆ ತೀರ್ಮಾನ ಮಾಡಿದ್ಮೇಲೆ ಅವರ ಮನಸ್ಸು ಬದಲಾಯಿಸೋದೇ ಇಲ್ಲ." ಕುಸುಮಳ ಧ್ವನಿ ಸಿಡಿಯಿತು " ಎಂಥ ತೀರ್ಮಾನ? ಇದೇನು ತಮಾಷೆಯ ವಿಷಯವೆ? ಇದರಲ್ಲಿ ಹಠಮಾರಿತನ ಎಂದರೇನು?" ಸುನಂದ ಕುಸುಮಳನ್ನು ಮೌನವಾಗಿ ದಿಟ್ಟಿಸಿದಳೇ ಹೊರತು ಏನನ್ನೂ ಹೇಳಲಿಲ್ಲ. ಕುಸುಮ ಬಹಿರಂಗವಾಗಿ ಅಷ್ಟನ್ನೇ ಹೇಳಿದಳು ನಿಜ. ಆದರೆ ಅಂತರಂಗದೊಳಗೆ ಪ್ರಶ್ನೆಗಳು ಘೋರರೂಪ ತಳೆದು ಕುಣಿಯುತ್ತಿದ್ದವು: ಸುನಂದೆಯ ಗತಿ ಏನು ಇನ್ನು? ಈ ವಿರಸಕ್ಕೆ ಮುಕ್ತಾಯ ಯಾವುದು? ತನ್ನ ಗೆಳತಿಯಾದ ಸುನಂದೆಯ ಬಾಳಿನಲ್ಲಿ ಹೀಗಾಗುವುದು ಅನಿವಾರ್ಯವೇ? ಎಷ್ಟೊಂದು ಹಿಂಸೆ! ... ಆದರೆ, ಮನಸಿನೊಳಗಿನ ಆ ವಿಚಾರಗಳನೆಲ್ಲಾ ಕುಸುಮ ಅದುಮಿ ಹಿಡಿದಳೇ ಹೊರತು ಹೊರದೂಡಲಿಲ್ಲ. ರಾಧಮ್ಮನನ್ನು ಯೋಚನೆಗಳು ಕಾಡುತ್ತಿದ್ದವು.ಅಶುಭವನನ್ನು ನೆನೆದು ಆ ಹೃದಯ ಬಡೆದುಕೊಳ್ಳುತ್ತಿತ್ತು. ಆಕೆ ಅಂದಳು: "ಏನೇ ಆಗಲಿ, ದುಡುಕ್ಖೇಡಿ ಸುನಂದಾ" ಸುನಂದೆಗೆ ನೆನಪಾಯಿತು, ಹಿಂದೆಯೊಮ್ಮೆ, ಕೂಲಿ ಹೆಂಗಸನ್ನು ಕುರಿತು ರಾಧಮ್ಮ ಹೇಳಿದ್ದ ಮಾತು. 'ಯೋಚ್ನೆ ಮಾಡಿ ನೋಡು. ಒಮ್ಮೆ ಮುರಿದ್ಮೇಲೆ ಕೂಡ್ಸೊಕಾಗಲ್ಲ. ಕೂಡಿಸಿದರೂ ಅದು ಭದ್ರವಾಗಿರೋಲ್ಲ... ಒಟ್ನಲ್ಲಿ ದುಡುಕ್ಬೇಡ, ಅಷ್ಟೆ.'