ಪುಟ:Ekaan'gini.pdf/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ದಾಂಪತ್ಯ ಜೀವನ ಸುಖಕರವಾಗುವ ಚಿಹ್ನೆಗಳು ತೋರಿದ್ದವು. ಮದುವೆಗೆ ಮುಂಚೆಯೊಮ್ಮೆ, ಗೊತ್ತಾಗಿದ್ದ ಆ ಗಂಡನ್ನು ಕುರಿತು 'ಪಾಲಿಗೆ ಬಂದ ಪಂಚಾಮೃತ' ಎಂದು ವಿಜಯ ಆಡಿದ್ದಳು ನಿಜ. ಹಾಗೆ ಆಕೆಯ ಪಾಲಿಗೆ ನಿಜವಾಗಿಯೂ ಅಮೃತವೇ ಎಂಬ ಆಸೆಯ ಭಾವನೆ ಈಗ ಮೂಡಿತ್ತು.

     'ಓ ದೇವರೆ, ಇದೇ ಸತ್ಯವಾಗಲಿ; ನಾನು ಅನುಭವಿಸಿದ ಸಂಕಟ ನನ್ನ ವಿಜೀಗೆ ಪ್ರಾಪ್ತವಾಗದಿರಲಿ, ಎಂದು ಸುನಂದಾ ಮನಸ್ಸಿನಲ್ಲೇ ದೇವರನ್ನು ಪ್ರಾರ್ಥಿಸಿದಳು.
     ಆಕೆ ಬೇರೆ ಸೀರೆಯುಟ್ಟು ಬಂದು ಕನ್ನಡಿಯಲ್ಲಿ ಮುಖ ನೋಡಿಕೊಂಡಳು. ಮನೆಯ ಹಿರಿಯಕ್ಕನಾದ್ ತಾನು ಸಂತೋಷದಿಂದ ಓಡಾಡ್ಬೇಕಲ್ಲವೇ?.... ತಂಗಿಯನ್ನು ಆಕೆ ಕೈ ಹಿಡಿದು ಎಳೆದು ತಂದು ಹೆರಳು ಹಾಕಿದಳು. ಸೀರೆ ಕುಪ್ಪುಸಗಳನ್ನು ಎತ್ತಿಕೊಟ್ಟಳು. ಆಯ್ಕೆ ಏನೇನೋ ಕಷ್ಟದ್ದಾಗಿರಲಿಲ್ಲ. ವಿಶೇಷ ಸಮಾರಂಭಗಳಲ್ಲಿ ಉಡುವುದಕ್ಕೆಂದು ಅಲ್ಲಿದ್ದುದು ಓಂದೇ ಜತೆ....
     ಸಿಂಗರಿಸಿ ಸಿದ್ಧವದ ತಂಗಿಯನ್ನು ನೋಡಿ ಸುನಂದೆಗೆ ಹೆಮ್ಮೆ ಎನಿಸಿತು. ಸುರಸುಂದರಿಯಲ್ಲದೆ ಹೋದರೂ ಸ್ಫುರದ್ರೂಪಿಣಿ. ಯೌವನದ ಗಾಂಭೀರ್ಯ ಘಾಸಿಗೊಳಿಸದೇ ಇದ್ದ ಮುಗ್ಧ ಸೌಂದರ್ಯ.
     ಸುನಂದಾ ವಿಜಯಾಗೆ ದೃಷ್ಟಿ ತೆಗೆದಳು.
     ಹಾಗೆಮಾಡಿದ ಬಳಿಕ, "ಓದಿರೋ ಆಧುನಿಕರು ಅನಿಸಿಕೊಂಡಿದ್ದೀವಿ.ಆದರೆ ಕಂದಾಚಾರ ಒಂದನ್ನೂ ಬಿಟ್ಟಿಲ್ಲ" ಎದ್ದು ನಕ್ಕಳು. ವಿಜಯಳಿಗೂ ನಗು ಬಂತು.
     "ಪಾಪ ಮಲಕ್ಕೊಂತು", ಎಂದು ತೊದಲುತ್ತ ಬರಿಗೈಯಲ್ಲಿ ಸರಸ್ವತಿ ಬಂದಳು.
     "ಬಾ ಚಿನ್ನ", ಎಂದು ವಿಜಯ ಕೈಚಾಚಿ ಕರೆದಳು.
     "ಏತ್ಕೊ ಬೇಡ್ವೆ....ಸೀರೆಯಲ್ಲಾ ಕೊಳೆಯಗುತ್ತೆ. ಅವಳ ಲಂಗನಾದರೂ ಬದಲಾಯಿಸ್ತೀನಿ, ತಾಳು...." ಎಂದಳು ಸುನಂದಾ.
    ಆ ಮಾತು ಅರ್ಥವಾದವಳಂತೆ ಸರಸ್ವತಿ ರೇಗಿ ಪ್ರತಿಭಟಿಸಿ ರಾಗ