ಪುಟ:Ekaan'gini.pdf/೨೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೬ ಏಕಾಂಗಿನಿ ವಕೀಲರ ಮತ್ತಿತರರ ತಂಡವೇ ಒಳಕ್ಕೆ ಬರತೊಡಗಿತು. ಎಲ್ಲರೂ ಹೊರ ಹೋಗುತಿದ್ದ ಸುನಂದೆಯತ್ತ ದೃಷ್ಟಿ ಹಾಯಿಸುವವರೇ. ಸೋಮಶೇಖರನೆಂದ; "ಡಿಕ್ರಿ ಆದ ಹಾಗೆಯೇ. ಬರೀಬೇಕು ನೋಡಿ. ಅದಕ್ಕೆ ತಡ. ಮೂವತ್ತನೆ ತಾರೀಕು ಸಹಿ ಹಾಕ್ತಾರೆ." ಕೃಷ್ಣಪ್ಪನವರಿಗೆ ಅದೊಂದೂ ತಿಳಿಯದ ವಿಷಯವಾಗಿರಲಿಲ್ಲ. ಹೀಗೂ ಆಗಬೇಕಾಯಿತೆಂಬ ಯಾತನೆ ಅವರನ್ನು ದಹಿಸುತ್ತಿತ್ತು. ಆ ವಾತಾವರಣದಿಂದೊಮ್ಮೆ ಹೊರಟು ಹೋಗಬೇಕೆಂಬುದೊಂದೇ ಅವರಿಗಿದ್ದ ಯೋಚನೆ. "ಮನೆಗೆ ಹೋಗೋಣ್ವೆ ಸುಂದಾ?" "ಹೂಂ" "ಹ್ಯಾಗೆ ಹೋಗ್ತೀರಾ? ತಾಳಿ," ಎನ್ನುತ್ತ ಸೋಮಶೇಖರ ಕುದುರೆ ಗಾಡಿ ತರಿಸಿದ. ಕೃಷ್ಣಪ್ಪನವರು ಬೇಡವೆಂದರೂ ಮುಂದಾಗಿ ತಾನೆ ಗಾಡಿಯವನಿಗೆ ಹಣ ಕೊಟ್ಟ. ಒಂಟಿ ಎತ್ತಿನ ಕುದುರೆ ಗಾಡಿ ಶೇಷಾದ್ರಿಪುರಕ್ಕೆ ಹೊರಟಿತು.

                     *           *             *             *

ಮೂವತ್ತನೆಯ ತಾರೀಕು ನ್ಯಾಯಾಧೀಶರು, ಸುನಂದಾ--- ಪುಟ್ಟಣ್ಣರ ವಿವಾಹ ವಿಚ್ಛೇದನಕ್ಕೆ ಸಮ್ಮತಿ ಇತ್ತು ಆಯನ್ನಿತ್ತರು. ಅದು ತಿಳಿದಾಗ ಸುನಂದಾ, ಕತ್ತಿನಲ್ಲಿದ್ದ ಮಾಂಗಲ್ಯ ಸೂತ್ರಕ್ಕೆ ಕೈ ಹಾಕಿದಳು. ಕರಿಮಣಿ ಕಡಿದು ಬಂತು.

                                     ೨೮

ಕುಸುಮಾ ಸುನಂದೆಯನ್ನು ಹುಡುಕಿಕೊಂಡು ಶಿಶುವಿಹಾರಕ್ಕೆ ಬಂದಳು. "ಮನೆಕಡೆ ಬರಲೇ ಇಲ್ಲ ನೀವು", ಎಂದು ಆಕೆ ಆಕ್ಷೇಪಿಸಿದಳು."ಏನಾಯ್ತು?" ಎಂದೂ ಕೇಳಿದಳು. "ನೀವೆಲ್ಲ ಜಯಶೀಲಳಾಗು ಎಂದಿದ್ದಿರಿ. ಜಯಶೀಲಳಾಗೆ ಬಂದೆ."