ಪುಟ:Ekaan'gini.pdf/೨೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


   "ನನಗೇನ್ಗೊತ್ತು?"
   ವೆಂಕಟರಾಮಯ್ಯ ಸಿಟ್ಟಾದ.
   "ಸುಳ್ಳು ಹೇಳ್ತಿದಿಯಾ. ಆಗ್ಲೆ ಅಂದ್ರು ನಿಮ್ಮಕ್ಕ--ಪದುಮ ಕಾಣಿಸ್ಲಿಲ್ವೇ? ಅಂತ"
   ಕತ್ತು ಕೊಂಕಿಸಿ ನುಡಿದ 'ಪದುಮ ಕಾಣಿಸಿಲ್ವೇ?' ಎಂಬ ಪದೋಚ್ಚಾರಣೆ ಸುನಂದೆಯ ಸ್ವರದ ಅನುಕರಣವಾಗಿತ್ತು.
   ವಿಜಯಾ ಬಿದ್ದುಬಿದ್ದು ನಕ್ಕಳು. ಆ ದೃಶ್ಯ ಮನಮೋಹಕವಾಗಿತ್ತೆಂದು ವೆಂಕಟರಾಮಯ್ಯ ಒಂದು ಕ್ಷಣ ಸುಮ್ಮನೆ ಕುಳಿತ. ಬಳಿಕ, ಅವಮಾನಿತನಾದವನಂತೆ ನಟಿಸುತ್ತ ಆತನೆಂದ :
   "ಯಾಕೆ ನಗ್ತಿದೀಯಾ ಹಾಗೇ?"
   "ನೀವು ಮೈಸೂರು ಮಲ್ಲಿಗೆ ಹೆಸರು ಕೇಳಿದಿರಾ?"
   ಸುನಂದಾ ಮುಡಿದಿದ್ದ ಮಲ್ಲಿಗೆ ಹೂವಿನತ್ತ ನೋಡುತ್ತ ಆತನೆಂದ,
   "ಮೈಸೂರು ಮಲ್ಲಿಗೆಯೇ?"
   "ಹಾಡಿನ ಪುಸ್ತಕದ ಹೆಸರು ಕಣ್ರೀ"
   "ಓ!"
   "ಅದರಲ್ಲೊಂದು ಹಾಡಿದೆ 'ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತೂಂ'ತ.
   "ಓಹೋ ಆಮೇಲೆ? ಅದೇನು ಹಾಡೋ, ರಾಗವಾಗಿ ಹೇಳೆ ದಮ್ಮಯ್ಯ!"
   "ಠೂ ಠೂ! ಇದೊಳ್ಳೆ ಉಪಾಯ ನಿಮ್ಮದು. ನಾನು ಹಾಡಲ್ಲ...."
   "ಇರಲಿ, ಹಾಡೇ,"
   "ಖಂಡಿತ ಇಲ್ಲ....ಆಮೇಲೆ, ಪದುಮ ಕಾಣೋಕೆ ಸಿಗಲಿಲ್ಲಾಂತ ರಾಯರು ಸಿಟ್ಟಾಗ್ತಾರೆ."
   ಈಗ ಪ್ರತಿಯೊಂದೂ ಅರ್ಥವಾಗಿ ವೆಂಕಟರಾಮಯ್ಯ ಪರಮ ಸಂತುಷ್ಟನಾದ.
   "ನಿಮ್ಮನೇಲಿ ಆ ಹಾಡಿನ ಪುಸ್ತಕ ಇದೆಯೆ?"ಎಂದು, ಏನನ್ನೊ ಯೋಚಿಸುತ್ತಿದ್ದವನಂತೆ, ಆತ ಹೆಂಡತಿಯನ್ನು ಕೇಳಿದ,