ಪುಟ:Ekaan'gini.pdf/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

"ಪುಸ್ತಕ ಇಲ್ಲ. ಬರಕೊಂಡಿರೋದಿದೆ," ಎಂದಳು ವಿಜಯ.

      "ಶಿವಮೊಗ್ಗೆಗೆ ಹೋದ್ಮೇಲೆ ನಮ್ಮನೆಗೆ ಆ ಪುಸ್ತಕ ಕೊಂಡುತರಬೇಕು."
      "ನಾನು ಹಾಡಿದರೆ ಅತ್ತೆ ಸುಮ್ನಿರ್ತಾರ?"
      ಅಸ್ಪಷ್ಟವಾದ ಕಾತರವನ್ನು, ಸೂಚಿಸುತ್ತಿದ್ದ ಧ್ವನಿ. ಆತ ತನ್ನವಳನ್ನು ಬರಸೆಳೆದ. ಉತ್ತರ ಮೃದುವಾಗಿತ್ತು:
      "ಹುಚ್ಚಿ! ನಿನ್ನತ್ತೆ ನರರಾಕ್ಷಸೀಂತ ತಿಳಕೊಂಡ್ಯಾ? ಸಾಕಷ್ಟು ಸಂಕಷ್ಟ ಅನುಭವಿಸಿದ ಜೀವ ಅದು. ನೀನು ಮನೆಗೆ ಬಂದೆ ಅಂದರೆ ಆಕೆಗೆ ಎಷ್ಟೊಂದು ಸಂತೋಷವಾಗುತ್ತೆ ಗೊತ್ತಾ?"
      ಮತ್ತೊಮ್ಮೆ ಸುನಂದೆಯ ಸ್ವರ ಕೇಳಿಸಿತು. ತುಂಟತನದ ಛಾಯೆ ಇಲ್ಲದ ನಿರ್ವಿಕಾರವಾದ ಮೆಲುಧ್ವನಿ.
      "ವಿಜಯಾ. ಸ್ನಾನಕ್ಕೆ ಕರಕೊಂಡ್ಬರಬೇಕಂತೆ ಕಣೇ"
      "ಬಂದೆ ಅಕ್ಕಾ," ಎನ್ನುತ್ತ ಗಂಡನ ಕಡೆಗೆ ತಿರುಗಿ ವಿಜಯಾ ಅಂದಳು:
      "ಕೈಬಿಡಿ. ಏಳಿ ಹೊತ್ತಾಯ್ತು."ಆತ ಮೆಲ್ಲನೆದ್ದು, ಮೈಮುರಿದು, ಊ ಎಂದು ಉಸಿರುಬಿಟ್ಟು, ಹೆಂಡತಿಯನ್ನು ಹಿಂಬಾಲಿಸಿದ.
      ಸ್ನಾನದ ಮನೆಗೆ ಗಂಡನನ್ನು ಕರೆದೊಯ್ಯುತ್ತಿದ್ದ ವಿಜಯಳನ್ನು, ಅದುಗೆ ಮನೆಯ ಬಾಗಿಲಿನಲ್ಲಿ ನಿಂತು ಸುನಂದ ನೋಡಿದಳು. ತಂಗಿ ತಲೆಯೆತ್ತಿದಾಗ ಆಕೆಯನ್ನು ನೋಡಿ ಅಕ್ಕ ಸಣ್ಣಗೆ ನಕ್ಕಳು. ವಿಜಯಳಿಗೆ ನಾಚಿಕೆಯಾಯಿತು.
      ಆ ನಾಚಿಕೆಯ ಜಾಗದಲ್ಲಿ ಬೇರೊಂದು ಭಾವನೆ ಮರುಕ್ಷಣವೆ ಮೊಳೆಯಿತು. ಎಂತಹ ಹಿರಿಯ ಜೀವಿ ತನ್ನ ಅಕ್ಕ ಹೃದಯದೊಳಗೆ ಅಷ್ಟೊಂದು ಬೇಗುದಿಯಿದ್ದರೂ ಆಕೆಯ ವೈಯಕ್ತಿಕ ಬದುಕು ಬರಡು ಭೂಮಿಯಾಗಿ ಮಾರ್ಪಟ್ಟಿದ್ದರೂ ನಗುನಗುತ್ತಾ ಹೇಗೆ ಓಡಾಡುತ್ತಿದ್ದಾಳೆ ಆಕೆ! ತನ್ನ ಅಕ್ಕನನ್ನು ಆಗ ಆವರಿಸಿರುವುದು ತಂಗಿ ಸುಖಿಯಾಗಿರಬೇಕೆಂಬ ಆಸೆ ಮಾತ್ರ. ಒಡಹುಟ್ಟಿದವಳ ಬದುಕು ಸುಗಮವಾಗಬೇಕೆಂಬ ಅಭಿಲಾಷೆ ಮಾತ್ರ.
      ಅಕ್ಕನ ದುರವಸ್ಥೆಯ ವಿಷಯ ತನ್ನ ಗಂಡನಿಗೆ ತಿಳಿಯದು. ಅವರಿಂದ ಬಚ್ಚಿಡುವುದಕ್ಕುಂಟೆ? ಆದಷ್ಟು ಬೇಗನೆ ಅದೆಲ್ಲವನ್ನೂ ತಾನು ಅವರಿಗೆ ಹೇಳಬೇಕು.