ಪುಟ:Ekaan'gini.pdf/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಏಕಾಂಗಿನಿ 21

ಆದರೂ ಮಾತು ಹೊರಡಲಿಲ್ಲ. ಕೊನೆಗೆ ಆ ಮೌನ ದುಸ್ಸಹವಾಯಿತೆಂದು ಸುನಂದಾ ಅಂದಳು:
“ಪದ್ಮಾ ಅಂತ ನಿನ್ನನ್ನು ಕೂಗಿದ್ದಕ್ಕೆ ಅವರೇನಂದರು?”
“ಪದ್ಮಾ ಅನ್ನೋದೂ ನನ್ನ ಹೆಸರೇ ಇರಬಹುದೂಂತ ತಿಳಿಕೊಂಡಿದ್ರು. ತಮಾಷಿ! ಅಂಥದೊಂದು ಹಾಡಿದೇಂತ ಅವರಿಗೆ ಗೊತ್ತೇ ಇರ್‍ಲಿಲ್ಲ!”
“ಹೇಳ್ಕೊಟ್ಟೆ ತಾನೆ?"
“ಶಿವಮೊಗ್ಗೆಗೆ ಹೋದ್ಮೇಲೆ ಮೈಸೂರು ಮಲ್ಲಿಗೆ ಪುಸ್ತಕ ಕೊಂಡ್ಕೊಳ್ಳೋಣಾಂದ್ರು."
ಸುನಂದೆಗೂ ಹಿಂದೆ ಅಂತಹ ಆಸೆಗಳಿದ್ದುವು. ಗತಕಾಲದೊಂದು ಸಂಭಾಷಣೆಯ ತುಣುಕು ಆಕೆಯ ಕಿವಿಗಳಲ್ಲಿ ಮೊರೆಯುತ್ತಿತ್ತು.
'ನಾವು ಕಲ್ಚರ್‍ಡ್ ಆಗಿರ್‍ಬೇಕು, ಅಲ್ವಾ?'
'ಅದೇನೆ ಕಲ್ಚರ್‍ಡ್ ಅಂದ್ರೆ?'
ಹಸುಳೆಯ ಮರು ಪ್ರಶ್ನೆಯಲ್ಲ_ತಿರಸ್ಕಾರ ಬೆರೆತ ವ್ಯಂಗ್ಯೋಕ್ತಿ. ಆಸೆಯ ಎಳೆಯ ಕುಡಿ ಕಡಿದು ಹೋಗಿತ್ತು ಅಲ್ಲಿಗೇ.
ಅಕ್ಕ ಮರುಮಾತನಾಡಲಿಲ್ಲವೆಂದು ಕಾತರ ಧ್ವನಿಯಲ್ಲಿ ವಿಜಯಾ ಕೇಳಿದಳು.
“ಯಾಕಕ್ಕ ಸುಮ್ನಿದೀಯಾ?"
ತೂಕಡಿಸುತ್ತಿದ್ದವಳನ್ನು ಎಚ್ಚರಿಸಿದ ಹಾಗಾಯಿತು ಸುನಂದೆಗೆ,
“ಏನೂ ಇಲ್ಲ ವಿಜಯಾ. ಸುಮ್ನೆ ಯೋಚಿಸ್ತಿದ್ದೆ.”
“ಏನು ಯೋಚ್ನೆ ? ಬೇಸರವಾಗುತ್ತಾ?...."
ಯೋಚನೆಯ ಮಾತೆತ್ತಿದುದೇ ತಪ್ಪಾಯಿತು. ಮತ್ತಷ್ಟು ತೊಡಕಿನ ಪ್ರಶ್ನೆ...
“ಇನ್ನು ನೀನು ಹೊರಟ್ಹೋಗ್ತೀಯಲ್ಲಮ್ಮ...."
ತಾನು ಹೊರಟು ಹೋದಮೇಲೆ ಉಳಿಯುವಾಕೆ ಅಕ್ಕನೊಬ್ಬಳೇ. ಚಿಕ್ಕಂದಿನಿಂದಲೂ ತಾವು ಒಬ್ಬರಿಗೊಬ್ಬರು ಅಂಟಿಕೊಂಡೇ ಬಂದವರು. ಗಂಡನ ಮನೆಯಿಂದ ಅಕ್ಕ ಹೊರಟು ಬಂದ ಮೇಲಂತೂ ಆ ಅನ್ಯೋನ್ಯತೆ ಹೊಸ ಹಂತವನ್ನು ಮುಟ್ಟಿತು. ಈ ಅಗಲಿಕೆಯಿಂದ ತನಗೂ ಸಂಕಟವಾಗುವುದು. ಆದರೆ ತನ್ನ ಇನಿಯನ ಸಾನ್ನಿಧ್ಯದಲ್ಲಿ ಆ ಸಂಕಟ ಮರೆತು ಹೋಗುವುದು ಖಂಡಿತ. ಅಕ್ಕನಿಗಾದರೆ ಹಾಗಲ್ಲ. ಆಕೆಯ ಕೊರಗಿಗೆ ಪರಿಹಾರ ಮಾರ್ಗವೇ ಇಲ್ಲ.
“ನಾನೇನಕ್ಕ ಮಾಡ್ಲಿ...?”
ದುಃಖದ ಸೆಲೆಯೊಡೆಯಿತು ವಿಜಯಳ ದ್ವನಿಯಲ್ಲಿ, ಸುನಂದಾ ಧಿಗ್ಗನೆದು ದೀಪ ಆರಿಸಿ, ತಂಗಿಯ ಬಳಿ ಕುಳಿತಳು. ಕತ್ತಲಲ್ಲಿ ಕೈ ಬೆರಳುಗಳು ಒಡಹುಟ್ಟಿದವಳ ಮುಖವನ್ನು ತಡವುತ್ತ ಕಣ್ಣುಗಳನ್ನು ಮುಟ್ಟಿ ನೋಡಿದುವು. ತುಂಬಿ ಹರಿಯುತ್ತಿದ್ದ ಕಂಬನಿ. ತಂಗಿಯನ್ನು ತಬ್ಬಿಕೊಂಡು ಸುನಂದಾ ತಾನೂ ಅತ್ತಳು.