ಪುಟ:Ekaan'gini.pdf/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾಂಗಿನಿ ೨೧

ತಂಗಿಯ ವಿಷಯದಲ್ಲಿ ಅಸೂಯೆಯೆ? ಉಂಟೆ ಎಲ್ಲಾದರೂ?

ಹಾಳು ಕಂಬನಿ ಒತ್ತರಿಸಿ ಬರುತ್ತಿರುವುದಾದರೂ ಯಾಕೆ?

...ತಾಯಿ ಒಳಬಾಗಿಲ ಬಳಿಗೆ ಬಂದು ಕೇಳಿದರು:

"ಏನು ಯೋಚಿಸುತ್ತಾ ನಿಂತಿದೀಯೇ ಸುನಂದಾ?"

ಆ ತಾಯಿಯೂ ಹಿರಿಯ ಮಗಳಾದ ತನ್ನನ್ನು ಕುರಿತೇ ಯೋಚಿಸುತ್ತಿದ್ದಳೋ ಏನೋ.

"ಏನೂ ಇಲ್ಲಮ್ಮ"

"ಕಣ್ಣು ಕೆಂಪಾಗಿದೆ.."

ಎಷ್ಟು ಸಹಸ್ರಸಾರೆ ಎಷ್ಟು ಸಹಸ್ರ ಹೆಂಗೆಳೆಯರು ಆ ಉತ್ತರವನ್ನು ಕೊಟ್ಟಿದ್ದರೋ!

ಸತ್ಯಸಂಗತಿಯನ್ನು ತಾಯಿ ಬಲ್ಲಳು. ವಯಸ್ಸಾದರೇನಾಯಿತು? ತನ್ನದೇ ಮಾಂಸದೊಂದು ತುಣುಕು ನೋವಿನಿಂದ ನರಳಾಡಿದಾಗ ಆಕೆಗೆ ಸಂಕಟವಾಗದೆ ಇರುವುದುಂಟೆ?

--ಆದರೂ ಪ್ರಸ್ತಾವ ಮಾಡದಿರುವುದೇ ಮೇಲು, ಎಂದಿತು ಮನಸ್ಸು. "ಅವರದು ಎಷ್ಟು ಹೊತ್ತಾಗುತ್ತೋ ಏನೋ, ನೀನು ಕಾಫೀ ಕುಡೀಬಾರದೆ?

"ಪರವಾಗಿಲ್ಲಮ್ಮಾ ಏನೂ ಅವಸರವಿಲ್ಲ".

ತಾಯಿ ನಿಟ್ಟುಸಿರು ಬಿಟ್ಟು ಒಳಕ್ಕೆ ತಿರುಗಿದರು.

ಸುನಂದಾ ಬೀದಿಬಾಗಿಲ ಕಡೆಗೆ ತಲೆ ಹಾಕುವುದಕ್ಕೂ ತಂದೆ ಒಳಬರುವುದಕ್ಕೂ ಸರಿಹೋಯಿತು. ತಂದೆಯನ್ನು ಕಂಡೊಡನೆ ಸುನಂದಾ ಮುಖದ ಮೇಲೆ ಗೆಲುವಿನ ನಗೆ ಬರಸಿಕೊಂಡಳು. ಜೋಯಿಸರು ಸಿಕ್ಕಿದರೆ?-- ಎಂದು ತಾನಾಗಿಯೇ ಪ್ರಶ್ನಿಸಬೇಕೆನ್ನುವಷ್ಟರಲ್ಲೆ ಆಕೆಯ ತಂದೆ ಅಂದರು:

"ಎಲ್ಲಾ ಗೊತ್ಮಾಡ್ಕೊಂಡು ಬಂದಿದೀನಮ್ಮಾ. ನಾಳೆಯೇ ಆಗಿಹೋಗ್ಲಿ ನಾಡದು ಪ್ರಯಾಣಕ್ಕೆ ಘಳಿಗೆ ಚೆನ್ನಾಗಿದೆ. ಆಗದಾ?

"ಹಾಗೇ ಆಗಲಪ್ಪ", ಎಂದಳು ಸುನಂದಾ.