ಪುಟ:Ekaan'gini.pdf/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾಂಗಿನಿ ೨೫

 "ಏನು ಯೋಚ್ನೆ? ಬೇಸರವಾಗುತ್ತಾ?..."
 ಯೋಚನೆಯ ಮಾತೆತ್ತಿದುದೇ ತಪ್ಪಾಯಿತು. ಮತ್ತಷ್ಟು ತೊಡಕಿನ ಪ್ರಶ್ನೆ.
"ಇನ್ನು ನೀನು ಹೊರಟೋಗ್ತೀಯಲ್ಲಮ್ಮ."
 ತಾನು ಹೊರಟು ಹೋದಮೇಲೆ ಉಳಿಯುವಾಕೆ ಅಕ್ಕನೊಬ್ಬಳೇ. ಚಿಕ್ಕಂದಿನಿಂದಲೂ ತಾವು ಒಬ್ಬರಿಗೊಬ್ಬರು ಅಂಟಕೊಂಡೇ ಬಂದವರು. ಗಂಡನ ಮನೆಯಿಂದ ಅಕ್ಕ ಹೊರಟುಬಂದ ಮೇಲಂತೂ ಆ ಅನ್ಯೋನ್ಯತೆ ಹೊಸ ಅಂತವನ್ನು ಮುಟ್ಟಿತು. ಈ ಅಗಲಿಕೆಯಿಂದ ತನಗೂ ಸಂಕಟವಾಗುವುದು. ಆದರೆ ತನ್ನ ಇನಿಯನ ಸಾನ್ನಿಧ್ಯದಲ್ಲೆ ಆ ಸಂಕಟ ಮರೆತು ಹೋಗುವುದು ಖಂಡಿತ. ಅಕ್ಕನಿಗಾದರೆ ಹಾಗಲ್ಲ. ಆಕೆಯ ಕೊರಗಿಗೆ ಪರಿಹಾರ ಮಾರ್ಗವೇ ಇಲ್ಲ. 
 "ನಾನೇನಕ್ಕ ಮಾಡ್ಲಿ"
 ದುಃಖದ ಸೆಲೆಯೊಡೆಯಿತು ವಿಜಯಳ ಧ್ವನಿಯಲ್ಲಿ, ಸುನಂದಾ ದಿಗ್ಗನೆದ್ದು ದೀಪ ಆರಿಸಿ ತಂಗಿಯ ಬಳಿ ಕುಳಿತಳು. ಕತ್ತಲಲ್ಲಿ ಕೈ ಬೆರಳುಗಳು ಒಡ ಹುಟ್ಟಿದವಳ ಮುಖವನ್ನು ತಡಕುತ್ತ ಕಣ್ಣುಗಳನ್ನು ಮುಟ್ಟಿ ನೋಡಿದುವು. ತುಂಬಿ ಹರಿಯುತ್ತಿದ್ದ ಕಂಬನಿ. ತಂಗಿಯನ್ನು ತಬ್ಬಿಕೊಂಡು ಸುನಂದಾ ತಾನೂ ಅತ್ತಳು.
 "ನೀನು ಸುಖಿಯಾಗಿರು ವಿಜಯಾ, ಅಷ್ಟೇ ಸಾಕು ನನಗೆ, ಅಷ್ಟೇ ಸಾಕು. ಭಗವಂತ ನಿನಗೆ ಒಳ್ಳೇದು ಮಾಡಲಿ..."
 "ಅಕ್ಕಾ ಅಕ್ಕಾ"
 "ಏನು ವಿಜಯಾ?"
 "ನೀನೇನು ಪಾಪ ಮಾಡ್ದೇಂತ ಭಗವಂತ ನಿನಗೆ ಕೆಟ್ಟದು ಮಾಡ್ದ ಅಕ್ಕಾ?"
 "ನನ್ನಾಣೆ! ಹಾಗೆಲ್ಲ ಮಾತಾಡ್ಬಾರದು ನೀನು"
ಕಂಬನಿಯ ಅನಂತರ ನಿಟ್ಟುಸಿರು. ಬಳಿಕ ಮೌನ.
ಮೌನ ಮುರಿದು ಸುನಂದಾ ಅಂದಳು:
 "ನಾವು ಜತೆಯಾಗಿರೋದು ಇದೇ ಕೊನೇ ರಾತ್ರೆ, ಅಲ್ಲವಾ?"