ಪುಟ:Ekaan'gini.pdf/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾಂಗಿನಿ ೨೭

 ಹೋಗ್ತೀವಿ" ಎಂದು ವಿಜಯಾ ಹೇಳಿದಾಗ, ಮನೆಯಲ್ಲಿ ಪ್ರತಿಯೊಬ್ಬರಿಗೂ ಸಂತೋಷವಾಗದೆ ಇರಲಿಲ್ಲ.
 ಅಳಿಯನ ಪರವಾಗಿ ಮಗಳೇ ಈ ಮಾತು ಹೇಳಿದಳೆಂದು ಹೆಮ್ಮೆಪಡುತ್ತ ತಂದೆ, ವೆಂಕಟರಾಮಯ್ಯನೆದುರು ಅಂದರು.
"ಈ ರಾತ್ರಿ ಪ್ರಯಾಣ ಅಂದರೆ ಸಿದ್ಧ ಕೆಡಬೇಕು. ರಾತ್ರಿಯೂ ಇಲ್ಲೇ ಇದ್ದು ನಾಳೆ ಬೆಳಗ್ಗೆ ಹೊರಟರಾಗದೆ?"
 "ಇಲ್ಲ, ಬೇಡಿ ಇನ್ನೊಂದು ದಿವಸ ರಜಾ ತಗೊಳೋದಕ್ಕಾಗಲ್ಲ".
 ಅಳಿಯನ ಕಟ್ಟುನಿಟ್ಟಿನ ಜೀವನ ಕ್ರಮದ ಅಲ್ಪ ಪರಿಚಯ ಆಗಲೇ ಇದ್ದ ಮಾವ ಇದಿರು ಹೇಳಲಿಲ್ಲ.
 "ನಿಮ್ಮಿಷ್ಟ. ಇವತ್ತು ಹಗಲಾದರೂ ಇದ್ದು ಹೋಗೀಂತ ನಾನೇ ಪ್ರಾರ್ಥಿಸ್ಬೇಕಾಗಿತ್ತು. ಅದಕ್ಕೆ ಅವಕಾಶವೇ ಇಲ್ಲದ ಹಾಗೆ ವಿಜಯ್ ನ ನಿಮ್ಮನ್ನ ಒಪ್ಪಿಸಿದ್ಲು!"
 ವೆಂಕಟರಾಮಯ್ಯ ಮುಗುಳುನಕ್ಕ.
 ಈಗ ಸಾಕಷ್ಟು ಬಿಡುವಿದ್ದುದರಿಂದ ಪ್ರಯಾಣ ಸಿದ್ಧತೆ ವ್ಯವಸ್ಥಿತವಾಗಿಯೇ ನಡೆಯಿತು. ಹಗಲೆಲ್ಲಾ ಅಕ್ಕನ ಜೊತೆಯಲ್ಲೇ ಇರಬೇಕೆಂದು ವಿಜಯಾ ಆಶಿಸಿದ್ದಳು. ಆದರೆ ಅದು ಸಾಧ್ಯವಾಗಲಿಲ್ಲ. ಒಬ್ಬನಿಗೇ ಹೊತ್ತು ಹೋಗುವುದಿಲ್ಲವೆಂದು ಹೆಂಡತಿಯನ್ನು ಆತ ಬಳಿಯಲ್ಲೆ ಇರಿಸಿಕೊಂಡ.
ಸಂಜೆ ದಂಪತಿಗಳು ಊರಿನ ಬೀದಿಗಳಲ್ಲಿ ಸುತ್ತಾಡಿ ಬಂದರು. 
  ಮಾತನಾಡುವ ಕೆಲಸವನ್ನೆಲ್ಲ ಗಂಡನಿಗೇ ಬಿಟ್ಟುಕೊಟ್ಟು, ಸುನಂದೆಯ ತಾಯಿ ಕಿರಿಯ ಮಗಳನ್ನು ಕಳುಹಿಸಿಕೊಡಲಾಗದೆ ಕಂಬನಿ ಸುರಿಸಿದರು. ತನ್ನ ತಂಗಿಯನ್ನು ಕರೆದೊಯ್ಯಲು ನಿಂತಿದ್ದ ವೆಂಕಟರಾಮಯ್ಯನನ್ನು ಸುನಂದಾ ದಿಟ್ಟಿಸಿದಳು. ತಾಯಿ ಮಕ್ಕಳ ಅಗಲುವಿಕೆಯ ದೃಶ್ಯವನ್ನು ನೋಡಲಾರದೆ ಆತ ಉಗುಳು ನುಂಗಿದಂತೆ ತೋರಿತು.
 ಟ್ರಂಕು, ತಿಂಡಿಯಬುಟ್ಟಿ,ಚೀಲಗಳು ಜಟಕಾದಲ್ಲಿ ಕುಳಿತು,ನವದಂಪತಿಗಳ ಹಾದಿ ನೋಡಿದುವು.
 "ತಡವಾಗುತ್ತೆ," ಎಂದರು ಸುನಂದೆಯ ತಂದೆ.
 "ಸ್ಟೇಷನ್ನಿಗೆ ನೀನೂ ಬರೀಯಲ್ಲಕ್ಕ?"ಎಂದು ವಿಜಯಾ ಕೇಳಿದಳು.