ಪುಟ:Elu Suthina Kote.pdf/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

XV

ಮಿರುಗು ಬರುತ್ತದೆ. ಪ್ರಕೃತಿಯಲ್ಲಿರುವ ಕಾಮವ್ಯಾಪರ ತರುಣನಿಗೆ ಅರ್ಥವಾಗುತ್ತದೆ. ಆದರೆ ಯೌವನದ ಉಬ್ಬರದಲ್ಲಿ ಕಾಮದ ಭೇತಾಳ ನೃತ್ಯ ವಿಕಟವಾಗುತ್ತದೆ. ಮುದಿತನದ ಇಳಿತದಲ್ಲಿ ಮತ್ತೆ ದೂರದೃಷ್ಟಿ ಸಾಧ್ಯವಾಗಿ ಆದಷ್ಟು ಸಾಮರಸ್ಯ ಸಿದ್ಧಿಯಾಗುತ್ತದೆ. ಮತ್ತೆ ಅದೇ ಕಟ್ಟುಕತೆ ಮುಂದಿನ ಜನಾಂಗದ ಬಾಲಕರಿಗೆ ಸಾಗುತ್ತದೆ. ದೃಷ್ಟಿಯಲ್ಲಿಯೂ ಶಿಲ್ಪದಲ್ಲಿಯೂ ಇದೊಂದು ಸುಂದರವಾದ ಕವನ.

ಮನಸ್ಸಿನ ಗುಪ್ತ ಕಾಮನೆಗಳಿಗೆ ಬುದ್ಧಿ ಗೋಚರವಾಗಲು ಸಿಂಬಲ್ಸ್ ಅಥವಾ ಸಂಕೇತನಗಳ ರೂಪಕ ಬೇಕು. ಈ ಸಂಕೇತಗಳಿಗೂ ನಮ್ಮ ಹಳೆಯ ರೂಪಕಗಳಿಗೂ ಮುಖ್ಯವಾದ ಒಂದು ವ್ಯತ್ಯಾಸವಿದೆ. ಬುದ್ಧಿ ಜನ್ಯವಾದ ರೂಪಕಗಳು ಉಪಮೇಯ ವಸ್ತುಗಳೊಂದಿಗೆ ತಾರ್ಕಿಕವಾಗಿ ಸಮಂಜಸವಾದ ಸಂಬಂಧವನ್ನು ಹೊಂದಿರುತ್ತವೆ. ಆದರೆ ಮನಸ್ಸಿನ ಆಳದಿಂದ ಏಳುವ ಸಂಕೇತಗಳಿಗೂ ಉಪಮೇಯ ವಸ್ತುಗಳಿಗೂ ಇರುವ ಸಂಬಂಧ ತಾತ್ಕಾಲಿಕ ವಾದುದು, ಬುದ್ಧಿಭಾವ ಮಿಲನದಿಂದ ಉದ್ಯೋತವಾದದ್ದು, ಉಪಮೇಯ ವಸ್ತುಗಳನ್ನು ಸೂಚಿಸುವ ಕೆಲಸವಷ್ಟನ್ನೇ ಮಾಡುವಂತಹುದು. ಉದಾಹರಣೆಗೆ ಮೇಲಿನ ಪದ್ಯದ 'ಮಗು' ಎಂಬ ಸಂಕೇತವನ್ನು ತೆಗೆದುಕೊಳ್ಳಿ, ಕಾಮಭಾವ ಹುಡುಗನ ಮನಸಿನಲ್ಲಿ ಪದಾರ್ಪಣ ಮಾಡುವಾಗ 'ಮಗು' ವಿನಂತೆ ಎಳೆಯದಾಗಿರುತ್ತದೆ, ಮುಗ್ಧವಾಗಿರುತ್ತದೆ, ಶುದ್ಧವಾಗಿರುತ್ತದೆ. ಆದರೆ ಹುಡುಗ ಹದಿನೆಂಟನೆ ವಯಸ್ಸಿಗೆ ಬಂದಾಗ ಈ ಕಾಮಶಿಶು ಅವನಷ್ಟೇ ಬೆಳೆದಿರುತ್ತದೆ. ಯೌವನ ಬಂದಾಗ ಕಾಮವು ಅವನಿಗಿಂತ ನೂರುಪಾಲು ಬೆಳೆದು ಅವನದ ಬಯಕೆಯಿಂದ ಬಿರಿಯುವಂತೆ ಮಾಡುತ್ತದೆ. ಮುಪ್ಪು ಕವಿದಾಗ ಕಾಮ ಬಿಟ್ಟು ಹೋದ ಗೆಳೆಯನಂತೆ ಮಾಯವಾಗುತ್ತದೆ, ಅನುಭವದ ಕಡಲಿನಲ್ಲಿ ಕರಗಿ ಹೋಗುತ್ತದೆ. ಕವನದ ಅರ್ಥ ಇನ್ನೂ ಗಾಢವಾಗಿದೆ. ಕಾಮವು ಮಗುವಿನಂತೆ ಹುಡುಗನ ಮನಸ್ಸಿಗೆ ಬಂದಿತೋ ಅಥವಾ ಮೊದಲಿನಿಂದಲೂ ಮನಸ್ಸಿನಲ್ಲಿಯೇ ಗರ್ಭಿತವಾದುದು. ಈಗ ಗೋಚರವಾಯಿತೋ ಎಂಬ ಶಂಕೆಯೇಳುತ್ತದೆ:

“ನೀಲಿಮೆಗೆ ಮುಗಿಲರಳೆ ಉರುಳಿದುದ ಕಂಡಂಯ?
ಸುಮಕೆ ಸೌರಭ ಬಂದ ಘಳಿಗೆ ಯಾವುದು ಹೇಳು.
ಬಂತ ಮಗು?
ಅಥವ ಮನೆಯೊಳಗಿತ್ತೊ;
ಅಜ್ಞಾತದಾಳದೋಳು ತಲೆಮರೆಸಿ ಕುಳಿತೊಂದು ನನಹಂತೆ ಆಗ
ಅದು ಹೊರಬಿತ್ತೋ!
ಮಗು ಬಂದ ಮೇಲೆನಗೆ ಮಗುಬರಏನರಿವು.”

ಗುಪ್ತಚಿತ್ತದಲ್ಲಿ ಸಂಕೇತಗಳು ಬೆಳೆಯುವ ಮಾರ್ಗವೂ ವಿಚಿತ್ರವಾದುದು.