ಪುಟ:Elu Suthina Kote.pdf/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

xvi

ಕಾಲಾನುಕ್ರಮವಾಗಿ ತಾರ್ಕಿಕವಾಗಿ ವಾದಸರಣಿ ಬೆಳೆದಂತೆ ಬೆಳೆಯದೆ ಸಾದೃಶ್ಯವಿರೋಧಗಳಿಂದ ಒಂದರಿಂದೊಂದು ಸೂಚಿತವಾಗಿ ಸಂಕೇತಮಾಲೆ ಹಣೆದುಕೊಳ್ಳುತ್ತದೆ. ಈ ಮಾರ್ಗ ಹಿರಿಯ ಕವಿಗಳಲ್ಲಿ ಅಲ್ಲಲ್ಲಿ-ಮಟ್ಟಪ್ಪನವರ 'ಕಲ್ಕಿ' ಯಲ್ಲಿ, 'ರಾಮಾಯಣ ದರ್ಶನ'ದ ಕೆಲವು ಕನಸು ಕಣಸುಗಳಲ್ಲಿ, ಬೇಂದ್ರೆಯವರ 'ಕುರುಡು ಕಾಂಚಾಣ'ದಲ್ಲಿ ಕಂಡುಬಂದರೂ ಅವರ ರಾಜಮಾರ್ಗ ತಾರ್ಕಿಕವಾದುದು. ನವ್ಯಕಾವ್ಯದಲ್ಲಿ ಸಾಂಕೇತಿಕ ಚಿತ್ರಗಳ ಸುರುಳಿ ಬಿಚ್ಚುತ್ತ ಹೋಗುತ್ತದೆ. ಉದಾಹರಣೆಗೆ “ತಾಯಿ-ಮಗು” ಎಂಬ ಕವಿತೆಯನ್ನು ತೆಗೆದುಕೊಳ್ಳಿ. “ಸುಡು ಮಸಾಲೆಯ ಕಂಪಿ" ನಲ್ಲಿ ಆರಂಭಿಸುವ ಕವಿತೆ ಪರಮಾಣು ಸಿಡಿತದವರಗೂ ಬೆಳೆಯುತ್ತದೆ. ಭಿಕ್ಷುಕನಾದ ಹುಡುಗ ಸುಡುವ ಮಸಾಲೆ ದೋಸೆಯ ಕಂಪಿಗೆ ಮುಗ್ಧನಾಗಿ ಹೊಟೇಲಿನ ಕಿಟಕಿಯ ಬಳಿ ಬಂದು ನಿಲ್ಲುತ್ತಾನೆ. ಇವನು ಯಾರು ಇರಬಹುದೆಂದು ಕವಿಗೆ ಮರುಕದೊಂದಿಗೆ ಕುತೂಹಲೂ ಆಗುತ್ತದೆ. ಇವನ ವಿಳಾಸ ವಿಶ್ವವೇ. ಗುಡಿ ಚರ್ಚುಗಳ ಬಾಗಿಲಲ್ಲಿ ಬಾರದ ಸಾವಿಗಾಗಿ ಇವನ ಪ್ರಾರ್ಥನೆ ಸದಾಕಾಲವೂ, ಮನೋರಂಜನೆಯ ಕಾರಯಕ್ರಮಗಳಿರುವಡೆಯಲ್ಲಿ ಇವನ ಭಿಕ್ಷಾಪಾತ್ರೆಗೆ ಬಿಡಿಕಾಸಿಲ್ಲ. ಕವಿ ಇವನನ್ನು ತನ್ನ ಸೋದರನೆಂದು ಸಹಪಾಠಿಯೆಂದು ಎಳೆತನದ ಒಡನಾಡಿಯೆಂದು ಕಡೆಗೆ ಗುರುತಿಸುತ್ತಾನೆ. ಇಬ್ಬರ ತಾಯಿಯ ಅಣುಬಾಂಬಿನ ವ ತಾರಕ್ಕಾಗಿ ನಿರಾಶ ಯಿಂದ ದೇವರಲ್ಲಿ ಮೊರೆಯಿಡುತ್ತಾಳೆ. ಕವಿ ತನ್ನ ದೋಸೆಯನ್ನು ಮಗುವಿನ ಕೈಗೆ ತುರುಕುತ್ತಾನೆ. ಆದರೆ ಅಲ್ಲೊಂದು ಇಲ್ಲೊಂದು ಇಂತಹ ಕರುಣಾಕ್ರಿಯೆಗಳಿಂದ ಈ ಮಹಾ ಪ್ರಶ್ನೆಯನ್ನು ಬಿಡಿಸಲು ಸಾಧ್ಯವಿಲ್ಲ. ಭಿಕ್ಷುಕನ “ಕೊಡು ಮೂರು ಕಾಸ” ಎಂಬ ಮೊರ ಕವನದ ಅಂತ್ಯದಲ್ಲಿಯೂ ಮೊಳಗುತ್ತದೆ.

ಗುಪ್ತಚಿತ್ತದ ಆಳಕ್ಕೆ ಇಳಿಯಬಲ್ಲದು ಜಾಗೃತ ಬುದ್ಧಿಯಲ್ಲ, ನಿದ್ರೆಯೊಳಗಿನ ಕನಸು ಕನವರಿಕೆ, ಅತೀಂದ್ರಿಯವಾದ ಕಣಸು, “ನಿರಾಶಯ ಆಳದಿಂದ” ಎಂಬ ಕವಿತೆಯಲ್ಲಿ ಕವಿಯ ಕಣಸು-ಕಣ್ಣಿಗೆ ಹೊತ್ತು ಇಳಿಯುವುದು ಧರ್ಮ ಲೋಪದಂತೆಯೂ ಮನುಷ್ಯರು ಜೀವನ್ಮತರಂತೆಯೂ ಆತ್ಮಘಾತುಕರಂತೆಯೂ ಜಗತ್ತೇ ಸ್ಮಶಾನದಂತಯೂ ಕಾಣುತ್ತದೆ. “ಗೌರಿ ಶಂಕರ” ಎಂಬ ಕವಿತೆಯಲ್ಲಿ ಜಗತ್ತಿನ ತುತ್ತತುದಿಗೇರಿದ ನರನಿಗೆ ತತ್ವಪ್ರಕಾಶವಾಗುವುದು ಯಾರ ಮೈಯನ್ನು ಮಾತ್ರ ಭೋಗಿಸಿದ್ದನೋ ಆ ಹೆಣ್ಣಿನ ಕನವರಿಕೆಯಿಂದ, ಯಾವ ತಾಯಿಯನ್ನು ಮತ್ತಿನಲ್ಲಿ ಮರೆತಿದ್ದನೋ ಅವಳ ಕಣಸಿನ ಉಪದೇಶದಿಂದ ಇಲ್ಲಿ ಹೆಣ್ಣಿನ ಸಂಕೇತ ಮೊದಲು ಪರ್ವತ ಪ್ರದೇಶವನ್ನು, ಪ್ರಕೃತಿಯನ್ನು ಸೂಚಿಸುತ್ತದೆ. ಭೂಮಿಯ ಅತ್ಯುನ್ನತ ಶಿಖರವನ್ನೇರುವ ಆಕಾಂಕ್ಷೆಯೂ ಹೆಣ್ಣಿನ ಮೈಯನ್ನು ಪೂರ್ಣವಾಗಿ ಸ್ವಾಧೀನಪಡಿಸಿಕೊಳ್ಳುವ ಕಾಮವೂ ಆಳದಲ್ಲಿ ಒಂದೇ. ಆಮೇಲೆ ಅತ್ಮವಿಜಯದ