ಪುಟ:Elu Suthina Kote.pdf/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

xix “ಪೇರಾನಂದ'ದ ಅನುಭವ ಆಗುತ್ತದೆ. ಆಧುನಿಕ ಜೀವನದ ಚಿತ್ರಗಳು ಸಂಕೇತಗಳಾಗಿ ಉಪಮೆಗಳಾಗಿ ಶರ್ಮರ ಕವಿತೆಗಳಲ್ಲಿ ಉದ್ದಕ್ಕೂ ಸಿಗುತ್ತವೆ. ಮುಂದೆ ಬರುವ “ಕೋಭೆ”ಯನ್ನು ರೇಡಾರ್ ಕ್ರಮದಿಂದಲೋ ಎಂಬಂತೆ ಸೂಚಿಸಿ “ಸ್ಪಂದಿಸಿದ ರೇಡಿಯೋ”, ಕ್ರುದ್ಧನಾದ ಕಲೆಗಾರ ಶಿಲ್ಪವನ್ನು ಒಡೆದರೆ ಪರಮಾಣು ಸಿಡಿದು “ಅಸುವ ನುಂಗುವ ಸೂರ್ಯ ಮುಗಿಲೆಡೆಗೆ ನೆಗೆದಿರಲು ನೂರು ತಲೆಮಾರುಗಳ ಬಯಕೆ ಕಟ್ಟಿದ ನಗರ ನಿರ್ನಾಮವಾಯಿತು”. “ಕೊನೆಗಳಿಗೆ” ಎಂಬ ಕವನದಲ್ಲಿ ಮೃತ್ಯವಿಗೂ ಜೀವನಕ್ಕೂ ನಡೆಯುವ ತೋಟಿಯನ್ನು ಹೀಗೆ ಚಿತ್ರಿಸಿದೆ. “ಬೀದಿ ಮಗ್ಗುಲ ಕಲ್ಲು ಏಕಾಕಿ” ಅದನ್ನು “ಆವುದೋ ಕಷ್ಟುಮಡು ಕೈ ಬೀಸಿ ಕರೆಯುತ್ತಿದೆ”. ಜೀವಿ ಹೇಳುತ್ತಾನೆ, “ಇರುವ ಮನ ಸೋರಿದರು ಹಿತ, ಬಳಕೆ, ಬೇರೆ ಮನೆಯೇಕೆ? ಬೇಕೆ? “ಗೌರಿ ಶಂಕರ” ಎಂಬ ಕವಿತೆಯಲ್ಲಿ ಪರ್ವತಾಗ್ರವನ್ನು ಮುಟ್ಟಿದ ಮನುಷ್ಯನನ್ನು ಕವಿ “ಮುಗಿಲು ಮುತ್ತುವ ಮರದ ತುಟ್ಟ ತುದಿಗಿದೆ ಹದ್ದು” ಎಂದು ವರ್ಣಿಸುತ್ತಾನೆ. “ನಿರಾಶೆಯ ಆಳದಿಂದ” ಎಂಬ ಕವನದಲ್ಲಿ ಬರುವ ಈ ಚಿತ್ರವನ್ನು ನೋಡಿ: ಅದೂ ಕಾಗೆ, ಕರಿಯ ಕಾಗೆ, ಏರಿ ಏರಿ ಏರಿ ಹಾರಿ ಮುಗಿಲ ಮರೆಯ ಸೇರಿ, ತಮದ ಬಸುರಿನಾಳದಿಂದ ತಿಳಿವು ಚಿಕ್ಕೆಬೀಜಗಳನ್ನು ಕಿತ್ತು ಮುಕ್ಕತೊಡಗಿದೆ. ನಮ್ಮ ಮಾತುಕತೆಯಲ್ಲಿ ಹಲವು ಇಂಗ್ಲಿಷ್ ಪದಗಳನ್ನು ನಾವು ಬಳಸುತ್ತಿದ್ದೇವೆ. ಇವುಗಳಲ್ಲಿ ಕೆಲವಕ್ಕೆ ಕನ್ನಡದಲ್ಲಿ ಪರ್ಯಾಯ ಶಬ್ದಗಳೇ ಇಲ್ಲ. ಉದಾಹರಣೆಗೆ, ಸ್ವಿಚ್, ರೇಡಿಯೋ, ಬಸ್, ಬಾಂಬ್, ಬೆಂಚ್, ಕಾಲೇಜ್, ಹೊಟೇಲ್. ಇಂತಹವುಗಳನ್ನು ನವ್ಯ ಕವಿ ಉಪಯೋಗಿಸಿ ಕೊಳ್ಳದೆ ಇರುವುದು ಹೇಗೆ? ಆದರೆ ಪರ್ಯಾಯ ಪದಗಳು ಇರುವಾಗ ಅವುಗಳನ್ನು ಬಿಟ್ಟು ಇಂಗ್ಲಿಷ್ ಪದಗಳನ್ನು ಒಮ್ಮೊಮ್ಮೆ ಶರ್ಮರು ಉಪಯೋಗಿಸುವುದು ನನಗಷ್ಟು ಹಿಡಿಸುವುದಿಲ್ಲ. “ತಾಯಿ-ಮಗು” ಪದ್ಯದಲ್ಲಿ “ಹೈ ಇನ”ವನ್ನೂ “ದೀಪಾವಳಿ” ಪದ್ಯದಲ್ಲಿ “ರಾಬಿನ್ ರೆಡ್ ಬ್ರೆಸ್ಟ್”ನ್ನೂ ತರುವಂತೆ “ಕೂ ಡೆ ಟಾ” ಎಂಬ ಪದ್ಯಕ್ಕೆ ಫ್ರೆಂಚಿನಿಂದ ಶಿರೋನಾಮೆಯನ್ನೂ “ ಕೋಭೆ” ಎಂಬ ಪದ್ಯದಲ್ಲಿ “ವಾಚ್ ಕ್ಲಾಕ್ ಆಯಿತು” ಎಂಬ ಪದಗಳನ್ನೂ ತಂದಿದ್ದಾರೆ. ಇವುಗಳು ನನ್ನ ದೃಷ್ಟಿಯಲ್ಲಿ ನಿಜವಾಗಿಯೂ ನ್ಯೂನತೆಗಳು.