ಪುಟ:Elu Suthina Kote.pdf/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಏಳು ಸುತ್ತಿನ ಕೋಟೆ

ಮನುಜ ಕುಲದ ಧರ್ಮ, ನ್ಯಾಯ ಬುದ್ಧಿ ಸತ್ತ ಹಾಗೆ,
ಅದೋ ಕಾಗೆ,
ಕರಿಯ ಕಾಗೆ,
ಏರಿ ಏರಿ ಏರಿ
ಹಾರಿ ಮುಗಿಲ ಮರೆಯ ಸೇರಿ,
ತಮದ ಬಸುರಿನಾಳದಿಂದ
ತಿಳಿವು ಚಿಕ್ಕೆ ಬೀಜಗಳನ್ನು ಕಿತ್ತು ಮುಕ್ಕತೊಡಗಿದೆ.
ಹಣ್ಣು ಹೂವು ಎಲೆಗಳನ್ನು
ಕಳಚಿ ನಿಂತ ಗಿಡ ಲತೆಗಳು
ಚಳಿಗೊ ಏನೊ ನಡುಗಿವೆ.


ಏನದೇನು ಸದ್ದು?
ಎಲ್ಲಿ ಯಾರಿಗಿಂಥ ಇಂಥ ಗುದ್ದು?
ನೋಡು.
ಕಾಣದೇನು ಸೂಡು!
ಅದೋ ಬರಿಯ ಎಲುಬುಗೂಡು,
ಗುಣಿಯ ತೊಡಿ
ಆಳ ನೋಡಿ
ಮಲಗಿ ಒಳಗೆ ತಾನೆ ತನ್ನ ಮೇಲೆ ಮಣ್ಣ ಮುಚ್ಚಿತು
ಏನು ಎಂಥ ಹುಚ್ಚಿದು!
ಒಂದು ಎರಡು ಮೂರು ನಾಲ್ಕು ಹತ್ತು ನೂರ ಸಾವಿರ
ಹಿಂಡು ಹಿಂಡೆ ಬರತೊಡಗಿವೆ! ಮನ ನಡುಗಿದೆ ಥರಥರ!
ಇಳೆಯೆ ಇದು?
ಅಲ್ಲ, ಅಲ್ಲ!
ನಿಜಕು ಸೂಡು, ಕಾಡು!

****