ಪುಟ:Elu Suthina Kote.pdf/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಬಿಡದೆ ಮಳೆ ಜಡಿಯುತಿದೆ

ಜರಜರೋ.. ಜರಜರೋ..
ಸಂಜೆಗತ್ತಲ ಹೊತ್ತು.
ನಡುಹಗಲು ಮೊದಲಾದ ಮಳೆ ಬಿಡದೆ ಸುರಿಯುತಿದೆ;
ನಿರ್ವಿಕಾರದ ಗತಿಯ ಗೋಳುಮಳೆ ಇಳಿದಿಲ್ಲ, ಬೆಳೆದಿಲ್ಲ.
ಬುಮಿ ಬಾನು ಬರಿ ಬೂದಿ;
ಬೂದಿ ಬಣ್ಣದ ತೆರೆಯನೆಸೆದ ಮಳೆ ಸುರಿಯುತಿದೆ ಜರಜರೋ..
ಜರಜರೋ..........

ಮಳೆ
ಬಿಡದೆ
ಜಡಿಯುತಿದೆ!

ತನ್ನ ತೂಕದ ತಾನೆ ತಾಳಲಾರದೆ ಪಾಳುಮನೆ ಕುಸಿಯಿತು.
ನೆಲಕಂಡ
ನೋವಿನೊಡಲೊಳಗಿಂದ
ಆಕ್ರಂದ
ಮುದಿನಾಯಿ ನರಳುತಿದೆ ಎದೆಯ ವೆತೆಯನು ಒಂದೆ ನರಳುವಿಕೆಯೊಳು
ತುಂಬಿ
ಮಳೆ ಬಿಡದೆ ಜಡಿಯುತಿದೆ........
ಎದೆಯ ಹಸಿ ನೆಲದಲ್ಲಿ ಕಹಿ ನೆನಹ ಮೊಳಕೆಗಳು;
ಸಿಡುಕೆನಿತು, ದುಡುಕೆನಿತು? ತಪ್ಪುನಡೆ ಸಾಲೆನಿತು?
ಟಪ್ಪ ಟಪ ಟಪ ಟಪ್ಪ ಟಪ್ಪ ಟಪ ಟಪ ಟಪ್ಪ
ಸಾಲುಗಟ್ಟಿದ ಕೋಟಿ ಬೂಟುಕಾಲಿನ ಸದ್ದು ಕೊಲಲೆಂದೆ ಹೊರಟಂದು.....
ಮಳೆಹನಿಯ ಪಂಜರದ ನಡುವೆ ನುಸುಳಿದ ಕಪ್ಪು ಕವಿಯುತಿದೆ