ಪುಟ:Elu Suthina Kote.pdf/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೪

ಏಳು ಸುತ್ತಿನ ಕೋಟೆ

ಮನೆಯನ್ನು, ಮನವನ್ನು,
ಗಿಡ ಗುಡ್ಡ ದೇಗುಲವು ಹಳೆಯ ಪಳಕೆಯ ಮೊಗದ ನೆನಹಂತೆ
ಮರೆಯುತಿವೆ ಮಾಟವನ್ನು.

ಬಿಡದೆ ಮಳೆ ಸುರಿಯುತಿದೆ ಜರಜರೋ......... ಜರಜರೊ.........
ಹಿಂದೊಮ್ಮೆ ಹೆಮೋಡ ಇಂತೆ ಕರೆಯಲು ಸಾವ
ನಿರ್ದೋಷಿ ಜನಕುಲವು ಗೋಗರೆಯಿತು.
(ಮುದಿನಾಯಿ ನರಳುತಿದೆ ಎದೆಯ ವೆತೆಯನು ಒಂದೆ ನರಳುವಿಕೆಯೊಳು ತುಂಬಿ!)

ಸತ್ತವರ ಎಣಿಕೆ
ಅತ್ತವರ ನೆನಕೆ
ನೊಂದವರ ಅರಿಕೆಯನು
ಕೊಂದವರ ಮರುಕವನು
ನೆನೆದ ಮನ ನೀರಾಯ್ತು;
ಹರಿದ ಕಂಬನಿ ಕೊಡಿ ಮಳೆಯೊಡನೆ ಬೆರೆಯಿತು.

ಬಿಡದೆ ಮಳೆ ಸುರಿಯುತಿದೆ.....
(ಮುದಿನಾಯಿ ನರಳುತ್ತಿದೆ ಎದೆಯ ವೆತೆಯನು ಒಂದೆ ನರಳುವಿಕೆಯೊಳು ತುಂಬಿ!)

ನಂಬಿ ಕರೆದರೆ ಶಿವನು ಓ ಎನ್ನನೆ?
ಟಪ್ಪ ಟಪ ಟಪ ಟಪ್ಪ ಟಪ್ಪ ಟಪ ಟಪ ಟಪ್ಪ
ಕಣ್ಣು ಕಾಣದ ಸುತ್ತಿಗೆಯ ಮೊಳೆಯ ಬಡಿಯುತಿದೆ
ಮಣ್ಣು ಗೋಡೆಯ ಮೇಲೆ!

ಬಿಡದೆ ಮಳೆ ಸುರಿಯುತಿದೆ ಜರಜರೊ........... ಜರಜರೊ.............

****