ಪುಟ:Hosa belaku.pdf/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಡುವಿನ ಪರದೆ

೯೦

ನಾನು ಸಂಪೂರ್ಣ ನಿಮ್ಮವಳು...

-ಜಾನಕಿ "

ಓದು ಮುಗಿಸಿದೊಡನೆಯೇ ರಾಮನ್ ಪತ್ರವನ್ನು ಕೈಯಲ್ಲಿಯೇ ಮಡಿಸಿದರು. ಇನ್ನು ಜಗತ್ತಿನಲ್ಲಿರುವುದೇ ಬೇಡವೆಂದೆಣಿಸಿದರು. ಆ ದುಂಡುಮುಖದ-ಆ ಸೌಂದರ್ಯದ ಹಿಂದೆ ಇಂಥ ಕಪ್ಪು ಕಲೆ ಇರಬಹುದೆಂದು ರಾಮನ್ ತಿಳಿದಿರಲಿಲ್ಲ. ಪ್ರೇಮ ತೋರಿಸಿ ಕುತ್ತಿಗೆ ಕೊಯ್ದಷ್ಟು ಸಿಟ್ಟು ರಾಮನ್‌ರಿಗೆ ಬಂದುಬಿಟ್ಟಿತ್ತು. ಆ ಸಿಟ್ಟಿನ ರಭಸದಲ್ಲಿ 'ನಿನ್ನ ದಾರಿ ನಿನಗೆ ನನ್ನ ದಾರಿ ನನಗೆ! ನಮ್ಮಿಬ್ಬರ ನಡುವೆ ಇನ್ನು ಯಾವ ಸಂಬಂಧವೂ ಇಲ್ಲ!' ಎಂದು ಅವಳಿಗೆ ಪತ್ರ ಬರೆದು ತಿಳಿಸಿಯೂ ಬಿಟ್ಟಿದ್ದರು.

ರಾಮನ್ ಕಣ್ಣು ಮುಚ್ಚಿ ಹಾಗೆಯೆ ಖುರ್ಚಿಯಲ್ಲಿ ಕುಳಿತರು. ಮತ್ತೆ ಆ ದುಂಡು ಮುಖ, ಕೊರೆದ ಕಣ್ಣು, ಹಳದಿ ಮಿಶ್ರಿತ ಗೌರವರ್ಣ, ಉಂಗುರು ಗೂದಲು ಕಾಣಿಸತೊಡಗಿದವು. ಅಂಜಿ ಒಮ್ಮೆ ಕಣ್ಣು ತೆರೆದರು--ಪ್ರಣಯ ಭಂಗದ ಸ್ಮ್ರತಿ ಅವರನ್ನು ಎಚ್ಚರಿಸಲಿಲ್ಲ.

"ಮೇ ಆಯ್ ಕಮಿನ್ ” ಎಂಬ ಮೇಜರ್ ಡಕ್ಸ್‌ಬರಿಯ ಕೂಗು ಅವರನ್ನೆಚ್ಚರಿಸಿತು.

ಸದ್ಯದ ಪರಿಸ್ಥಿತಿಯಲ್ಲಿ ಏಕಾಂತಬಯಸುತ್ತಿದ್ದ ರಾಮನ್ ರಿಗೆ ಮೇಜರ್ ಡಕ್ಸ್‌ಬರಿಯ ಆಗಮನ ಅಷ್ಟು ಸರಿಬರಲಿಲ್ಲವಾದರೂ, ಅದನ್ನು ಹೊರಗೆ ತೋರಗೊಡುವಂತಿರಲಿಲ್ಲ. ಏಕೆಂದರೆ ಮೇಜರ್ ಡಕ್ಸ್‌ಬರೀ, ಕೋಲಾಲಂಪೂರದ ಸ್ಟೇಶನ್ ಏರಿಯಾ ಕಮಾಂಡರ್, ಮೇಲಾಗಿ ಸಯಾಮ್ ರೇಲ್ವೆ ಪ್ರಿಝನರ್ಸ್ ವಿಚಾರಣೆಯ ಮಿಲ್ಟ್ರೀ ಟ್ರಿಬ್ಯೂನಿನಲ್ಲಿಯ ನ್ಯಾಯಾಧಿಪತಿ.

“ಕಮಿನ್ ಸರ್” ಎಂದು ಮೇಲೆಮೇಲೆ ನಗು ತೋರಿಸುತ್ತಾ ರಾಮನ್ ಡಕ್ಸ್‌ಬರಿಯನ್ನು ಸ್ವಾಗತಿಸಿದರು.

"ನಿಮಗಾಗಿ ಒಂದು ಹೊಸ ಸಂತೋಷದ ಸುದ್ದಿಯನ್ನು ತಂದಿದ್ದೇನೆ" ಎನ್ನುತ್ತಾ ಡಕ್ಸ್‌ಬರಿ, ಬದಿಯ ಖುರ್ಚಿಯ ಮೇಲೆ ಕುಳಿತುಕೊಂಡರು. "ಹಾಗಾದರೆ ಮೊದಲು ಇದನ್ನು ತೆಗೆದುಕೊಳ್ಳಿ!" ಎಂದು ರಾಮನ್ ನಾಯರ್.