ಪುಟ:Hosa belaku.pdf/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೯೨

ನಡುವಿನ ಪರದೆ

ತನ್ನ ಆರ್ಡರ್ಲಿಯ ಕಡೆಯಿಂದ ಸ್ಕಾಚ್ ಬೀರ್ ತರಿಸಿ ಗ್ಲಾಸಿನಲ್ಲಿ ಹಾಕಿಕೊಟ್ಟರು. ಮಲಾಯಾದಲ್ಲಿ ಬೀರ್ ಕುಡಿಯುವುದೆಂದರೆ, ಹಿಮಾಲಯದಲ್ಲಿ ಕುಳಿತು ಚಹ ಕುಡಿದಷ್ಟು ಆನಂದ. ಡಕ್ಸ್‌ಬರೀ ಕೈಯಲ್ಲಿ ಗ್ಲಾಸನ್ನು ತೆಗೆದುಕೊಂಡು:

"ನೋಡಿ, ನಾನು ಇದೀಗ ಕಮಾಂಡ್ ಎಚ್. ಕ್ಯೂ. ಹೆಡ್ ಕ್ವಾರ್ಟರಿನಿಂದ ಬರುತ್ತಿದ್ದೇನೆ. ಅಲ್ಲಿ ಇಂದೇ ಆರ್ಡರ್ ಹೊರಟಿದೆ: ನಿಮ್ಮನ್ನು 'ಮೇಜರ್' ಪದವಿಗೆ ಏರಿಸಲಾಗಿದೆ. ಧನ್ಯವಾದಗಳು." ಎಂದು ತಿಳಿಸಿದರು. ಜಾನಕಿಯ ವಿಷಯದಿಂದ ವ್ಯಗ್ರವಾದ ರಾಮನ್‌ರ ಮನಸ್ಸು, ತಮಗೆ ಮೇಜರ್ ಹುದ್ದೆ ದೊರಕಿದ್ದಕ್ಕೆ ಪ್ರಸನ್ನವಾಯಿತು. "ಓ ಥ್ಯಾಂಕ್ಸ್ ಮಚ್" ಎಂದು ಹೇಳಿ ರಾಮನ್‌ರು ಮತ್ತೆ ಬೀರ್ ಬಾಟಲಿಗೆ ಕೈ ಹಾಕಿದರು. ಡಕ್ಸ್‌ಬರೀಯವರು ಮತ್ತೊಂದು ಗ್ಲಾಸನ್ನು ಕೈಯಲ್ಲಿ ತೆಗೆದುಕೊಳ್ಳುತ್ತಾ"

"ಇನ್ನೂ ಮುಂದೆ ನೋಡಿ: ಮೇಜರ್ ಪದವಿಯಷ್ಟಕ್ಕೇ ಮುಗಿಯಲಿಲ್ಲ. ನೀವು ನಾಳೆಯಿಂದ ಸಯಾಮ್ ರೇಲ್ವೆ ಪ್ರಿಝನರ್ಸ್ ವಿಚಾರಣೆಯ ಮಿಲ್ಟಿ ಟ್ರಿಬ್ಯೂನಿನಲ್ಲಿಯ ಒಬ್ಬ ಮೆಂಬರು" ಎಂದು ಹೇಳಿದರು. ಇದನ್ನು ಕೇಳಿಯಂತೂ ರಾಮನ್‌ರು ಅವಾಕ್ಕಾದರು. ಇಷ್ಟೊಂದು ಮಹತ್ವದ ಕೆಲಸ, ತಮ್ಮ ಪಾಲಿಗೆ ಇಷ್ಟು ಬೇಗ ಬರುವುದೆಂದು ಅವರು ತಿಳಿದಿರಲಿಲ್ಲ. ಆದರೇನು ಗ್ರಹಗಳೇ ಒಳಿತಾದಾಗ ಎಲ್ಲವೂ ಸಾಧ್ಯ––

ಬೀರ್ ಕುಡಿದು ಮುಗಿದ ನಂತರ ಇಬ್ಬರೂ ಸಿಗರೇಟನ್ನು ಹಚ್ಚಿದರು. ಕೈಯಲ್ಲಿದ್ದ ಕೊರೆದ ಕಡ್ಡಿಯನ್ನು ಒಗೆಯುತ್ತಾ ಡಕ್ಸ್‌ಬರಿ "ಸರಿ, ನಾನಿನ್ನು ಹೊರಡುತ್ತೇನೆ; ಈ ಫಾಯಿಲು ತೆಗೆದುಕೊಳ್ಳಿ! ಸಯಾಮ ರೇಲ್ವೆಯ ಮೇಜರ್ ಓಸಾಕಾ ಅವರ ವಿಚಾರಣೆಯ ಫಾಯಿಲು! ಚೆನ್ನಾಗಿ ಅಭ್ಯಾಸ ಮಾಡಿರಿ! ಅದರ ಜತೆಯಲ್ಲಿಯೇ ಇದೂ ಒಂದು ಫಾಯಿಲು: ಶ್ರೀಮತಿ ಓಸಾಕಾ ಅವರಿಗೆ ಸಂಬಂಧಿಸಿದುದು. ಇಬ್ಬರದೂ ನಾಳೆಯ ವಿಚಾರಣೆಯ ಕೊನೆಯ ದಿನ " ಎಂದು ಹೇಳಿ ಕೋಣೆಯಿಂದ ಹೊರಬಿದ್ದರು. ಈ ಓಸಾಕಾ ದಂಪತಿಗಳು, ಶತ್ರುಗಳಾದ ಜಪಾನಿಗಳೆಂಬುದನ್ನು ಬೇರೆ ಹೇಳಬೇಕಾಗಿಲ್ಲ.