ಒಂದು ಕ್ಷಣದ ಪೂರ್ವದಲ್ಲಿಯೆ ಉದಾಸೀನ ಚಿತ್ತರಾಗಿದ್ದ ರಾಮನ್ ನಾಯರರ, ಒಮ್ಮೆಲೇ ಉಲ್ಲಸಿತರಾದರು. ಫಾಯಿಲುಗಳನ್ನು ಕೈಯಲ್ಲಿ ತೆಗೆದುಕೊಳ್ಳುತ್ತಾ "ಇನ್ನು ಜಾನಕಿಯನ್ನು ಸಹಜವಾಗಿ ಮರೆಯಬಹುದು. ಬೇರೆಯ ಕೆಲಸದಲ್ಲಿ ಮನಸ್ಸು ತೊಡಗಿತೆಂದರೆ ತಾನೇ ಮರೆಯುತ್ತದೆ. ಆದರೂ ಜಾನಕಿ ತನ್ನ ಜೀವಮಾನದಲ್ಲಿ ಬಂದ ಮೊದಲನೆಯ ಹೆಣ್ಣು; ಅದೇ ಹುಣ್ಣಾಗಿ ಪರಿಣಮಿಸಿತು. ಹಾಯ್!" ಎಂದು ಮನಸ್ಸಿನಲ್ಲಿಯೇ ವಿಚಾರಿಸುತ್ತಾ, ಫಾಯಿಲಿನ ಪುಟಗಳನ್ನು ಒಂದೊಂದಾಗಿ ತೆರೆಯತೊಡಗಿದರು. ಫೆಯಿಲು ಶ್ರೀಮತಿ ಓಸಾಕಾನ ಕೇಸಿನದಾಗಿತ್ತು. ಅದನ್ನು ಸಂಪೂರ್ಣವಾಗಿ ಓದಲು ರಾಮನ್‌ರಿಗೆ ಸುಮಾರು ಎರಡು ಗಂಟೆ ಹಿಡಿಯಿತು. ಓದನ್ನು ಮುಗಿಸಿದ ನಂತರ ರಾಮನ್ ನಾಯರು ಮನಸ್ಸಿನಲ್ಲಿಯೇ ವಿಚಾರಿಸತೊಡಗಿದರು: “ಅಬ್ಬಾ ಹೆಣ್ಣೇ? ಹೆಣ್ಣು ಹೀಗೂ ಇರಬಹುದೇ? ಹೆಣ್ಣಲ್ಲ, ಪಿಶಾಚಿ! ಅವಳು ಸಿಂಗಾಪೂರಕ್ಕೆ ಬಂದದ್ದು, ೧೯೪೦ ರಲ್ಲಿ. ಅಲ್ಲಿ ಕೆಲಸ ಮಾಡುತ್ತಿದ್ದುದು ವೆಸ್ಟರ್ನ್ ಹಾಟೇಲಿನಲ್ಲಿ "ಸರ್‍ವ್ಹರ್" ಎಂದು. ಮುಂದೆ ಕ್ಯಾಪ್ಟನ್ ಗಿಬ್ಸನ್‌ನ ಜತೆಯಲ್ಲಿ ಪ್ರಣಯ. ಗಿಬ್ಸನ್ ಅವಳ ಪ್ರಣಯಜಾಲದಲ್ಲಿ ಬಲಿಬಿದ್ದ ಮೊದಲನೆಯಬೇಟಿ---ಎಂದು ಈ ಫೈಲು ಹೇಳುತ್ತಿದೆ. ಆದರೆ ಈ ಮೊದಲೆಷ್ಟೋ? ಗಿಬ್ಸನ್‌ನ ತರುವಾಯ ಮತ್ತೆ ಮೂವರು ಬ್ರಿಟಿಶ್ ಆಫೀಸರರು! ಇದೇನು? ಆ ಬ್ರಿಟಿಶ್ ಆಫೀಸರನ ಜತೆಯಲ್ಲಿ ಅರ್ಧ ನಗ್ನಾವಸ್ಥೆಯ ಚಿತ್ರ! ಎಲ್ಲಕ್ಕೂ ಮಿಗಿಲಾದ ಆಶ್ಚರ್ಯವೆಂದರೆ, ಇವಳು ಗಂಡನಿಂದ ದೂರವಿದ್ದು ೩ ವರುಷಗಳ ಮೇಲೆ ಮಗು ಒಂದು ಹುಟ್ಟಿದೆ. ಅದು ಗಿಬ್ಸನ್‌ನದು ಎಂದು ಅವಳೇ ಒಪ್ಪುತ್ತಾಳೆ. ಆ ಮಗು ಸತ್ತಿತಂತೆ, ಇವಳೇ ಕೊಂದಿರಬಹುದೆಂದು ಗಿಬ್ಸನ್ ಸಂದೇಹಪಡುತ್ತಾನೆ. ಮುಂದೆ ೧೯೪೪ರಲ್ಲಿ ಸಿಂಗಾಪೂರ ಜಪಾನಿಗಳ ಕೈವಶವಾದೊಡನೆ, ಮತ್ತೆ ಓಸಾಕಾನನ್ನು ಕೂಡಿಕೊಂಡಿದ್ದಾಳೆ. ಪಾಪ, ಅವನಿಗೆ ಇದೆಲ್ಲವೂ ಗೊತ್ತಿಲ್ಲವೇನೋ ? ಗೊತ್ತಿದ್ದರೆ ಗುಂಡಿಕ್ಕಿ ಕೊಲ್ಲುತ್ತಿದ್ದನೇನೋ? ಶ್ರೀಮತಿ ಓಸಾಕಾ ಇದೆಲ್ಲವನ್ನೂ ಮಾಡಿದ್ದು ದೇಶದ ಸಲುವಾಗಿ ಎಂದೇ? ಗೂಢಚಾರಿಣಿ, ದೇಶಭಕ್ತಿ––ಶೀಲ ಶಬ್ದದ ಸುಳಿವೇ ಇವರಲ್ಲಿಲ್ಲವೇನೋ! ಅದರಲ್ಲಿ ಹೆಣ್ಣುಗಳಿಗೇನು? ದೇಶಭಕ್ತಿಯ ಹೆಸರಿನಲ್ಲಿ ತಮ್ಮ ಸ್ವೈರಾಚಾರದ ವರ್ತನೆಗೆ ಇಂಬುಗೊಡುತ್ತಾರೆ. ಪಾಪ!
ಪುಟ:Hosa belaku.pdf/೧೦೨
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
ನಡುವಿನ ಪರದೆ
೯೩