ಪುಟ:Hosa belaku.pdf/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಡುವಿನ ಪರದೆ

೯೭


ನಿಮ್ಮ ಉಪಕಾರ ತುಂಬಾ ಆಯಿತು. ನೀವು ನನ್ನ ಸಲುವಾಗಿ ದುಃಖ ಪಡಬೇಡಿ. ನಮ್ಮಿಬ್ಬರ ಪ್ರೇಮ ನೋಡಿ ನಮ್ಮನ್ನು ಹುಚ್ಚರೆಂದು ಹಳಿಯಬೇಡಿ. ನೀವಿನ್ನೂ ಒಂದು ಶತಮಾನ ಹಿಂದಿದ್ದೀರಿ! ಇರಲಿ, ನೀವು ನಿಮ್ಮ ಕರ್ತವ್ಯ ನೆರವೇರಿಸಬಹುದು." ಎಂದು ಹೇಳಿ ಗಲ್ಲಿನ ಕಟ್ಟಿಯನ್ನೇರಿದ.



ಗಲ್ಲಿನ ಕೆಲಸ ಮುಗಿಸಿಕೊಂಡು ಹೊರಬರಲು ರಾಮನ್ ನಾಯರರಿಗೆ ಒಂದು ತಾಸು ಹಿಡಿಯಿತು. ಅದನ್ನು ಮುಗಿಸಿ ಹೊರಬಂದ ರಾಮನ್, ತಮ್ಮ ಜೀಪ್ ಕಾರನ್ನು ಏರಿದರು. ಡ್ರಾಯವ್ಹರ್ ಕೇಳಿದ:

"ಸರ್, ಹೆಡ್ ಕ್ವಾರ್ಟರಿನ ಕಡೆ ಒಯ್ಯಲಾ?"
"ಬೇಡ, 72 I.G.H. ದ ಕಡೆಗೆ ನಡೆ.”

ಡ್ರಾಯವ್ಹರ್ ೧೫ ನಿಮಿಷದಲ್ಲಿ ರಾಮನ್‌‌ರನ್ನು ಹಾಸ್ಪಿಟಲಿಗೆ ತಂದುಮುಟ್ಟಿಸಿದ. ರಾಮನ್ ಕಾರಿನಿಂದ ಇಳಿದವರೇ, ಜಾನಕಿಯ ರೂಮನ್ನು ಸೇರಿದರು. ಜಾನಕಿ ಅದೇ ತನ್ನ ನೈಟ್ ಡ್ಯೂಟಿಯನ್ನು ಮುಗಿಸಿ ಬಂದು, ಸ್ನಾನಮಾಡಿ ಮೈಯ ಬಟ್ಟೆಗಳನ್ನು ಬದಲಾಯಿಸುತ್ತಿದ್ದಳು. ಇಂತಹ ಸ್ಥಿತಿಯಲ್ಲಿ ತಾನಿದ್ದಾಗ, ರಾಮನ್‌ರು ತನ್ನ ಕೋಣೆಯಲ್ಲಿ ಬಂದುದನ್ನು ನೋಡಿ ಒಮ್ಮೆಲೇ ನಡುವಿನ ವರದೆಯನ್ನು ಸರಿಸಿದರು. ಒಂದು ನಿಮಿಷ ಸ್ತಬ್ಧತೆ ಆವರಿಸಿತ್ತು. ಜಾನಕಿ ಪತ್ತಲವನ್ನು ಸುತ್ತಿಕೊಳ್ಳುತ್ತಲೇ ಪರದೆಯ ಮರೆಯಿಂದಲೇ ಕೇಳಿದಳು:

"ಏಕೆ? ಮತ್ತೆ ಹಾಸ್ಪಿಟಲಿಗೆ ಬಂದಿರಿ? ಆರೋಗ್ಯ ಚೆನ್ನಾಗಿದೆಯಷ್ಟೇ?"

"ಆಗ ಬಂದದ್ದು ಆರೋಗ್ಯ ಸರಿಪಡಿಸಿಕೊಳ್ಳುವುದಕ್ಕೆ; ಈಗ ಬಂದು ತಲೆ ಸರಿಪಡಿಸಿಕೊಳ್ಳುವುದಕ್ಕೆ! ನನ್ನ ದೇವರ ಹತ್ತಿರ ಬಂದಿದ್ದೇನೆ!"


"ಅಂಜಬೇಡ; ಸ್ನಾನ ಮಾಡದೆ ದೇವರನ್ನು ಮುಟ್ಟುವ ಸಾಹಸ ನಾನಿನ್ನು ಮಾಡಲಾರೆ! ಸ್ನಾನ ಮಾಡುವುದಕ್ಕೇ ಬಂದಿದ್ದೇನೆ ಈಗ!"