ಪುಟ:Hosa belaku.pdf/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಹೊಸ ಬೆಳಕು.



ಗರ್ಲ್ಸ್ ಹಾಯ್ ಸ್ಕೂಲಿನಲ್ಲಿ ಕ್ಲಾಸುಗಳು ನಡೆದಿದ್ದುವು. 'ಶಾಲೆ' ಎಂದಮೇಲೆ ಕೇಳುವುದೇನು ? ಅಲ್ಲಿ ಸಂತೆಯ ಗದ್ದಲ ಕೂಡುವುದು ಖಂಡಿತ. ಶಾಲೆಯ ಹುಡುಗರೆಂದರೆ ಶುದ್ದ ಮಂಗಗಳು ! ಅದರಲ್ಲಿಯೂ ಹುಡುಗಿಯರ ಶಾಲೆ, ' Two watches two ladies never agree' ಎಂದು ಬಲ್ಲವರು ಹೇಳುತ್ತಾರೆ; ಅದು ಹದಿನಾರಾಣೆ ನಿಜ. ಎಳೆಯ ಹುಡುಗರ ಮನಸ್ಸಿಗೆ ಒಂದು ದಿಗ್ಟಂಧನವಿರುವುದಿಲ್ಲ. ಅದು ಕೇವಲ ಗಾಳಿಪಟ, ಮನಸ್ಸಿಗೆ ಬಂದಂತೆ ಹಾರಾಡುವುದು, ಅದಕ್ಕೆ ಮೇರೆ ಇಲ್ಲ, ಸೀಮೆ ಇಲ್ಲ. ಆದರೆ ಆ ಗಾಳಿಪಟಕ್ಕೆ ಸರಿಯಾದ ಸೂತ್ರವಿದ್ದರೆ.... !

ಲೀಲಾಬಾಯಿ ದೇಶಪಾಂಡೆಯವರು ಆ ಶಾಲೆಯ ಹುಡುಗಿಯರಿಗೆ ಭದ್ರವಾದ ಸೂತ್ರದಂತಿದ್ದರು. ಮ್ಯಾಟ್ರಿಕ್ ಕ್ಲಾಸಿಗೆ ಲೀಲಾಬಾಯಿಯವರು ಇಂಗ್ಲಿಶ್ ಕಲಿಸುತ್ತಿದ್ದರು. ಎಳ್ಳುಬಿದ್ದ ಸಪ್ಪಳವೂ ಸ್ಪಷ್ಟವಾಗಿ ಕೇಳಿಸುವಷ್ಟು ಶಾಂತತೆ ಅಲ್ಲಿ ನೆಲಸಿತ್ತು. ಕ್ಲಾಸಿನಲ್ಲಿಯ ಎಂಬತ್ತು ಹೆಣ್ಣು ಕಣ್ಣುಗಳು, ಸಿಂಗದ ಕೈಗೆ ಬಿದ್ದ ಹರಿಣಾಂಗನೆಯ ನೆನಪು ಮಾಡಿಕೊಡುತ್ತಿದ್ದುವು. ಆ ಹುಡುಗಿಯರು ಉಳಿದಾವ ಮಾಸ್ತರರಿಗೂ ಅಂಜುತ್ತಿರಲಿಲ್ಲ- ಜಪಾನು

ಜಗತ್ತನ್ನೇ ಗೆಲ್ಲುವ ಭಾಷೆಯಾಡುತ್ತಿತ್ತು; ಆದರೆ ಆಟಮಿನ ದರ್ಶನವಾದ ಕ್ಷಣ, ಬಿಳಿಯ ಧ್ವಜವೇರಿಸಿ ದಾಸ್ಯ ಒಪ್ಪಿಕೊಂಡು ಬಿಟ್ಟಿತಲ್ಲವೇ ? ಲೀಲಾಬಾಯಿಯವರು ಈ ವಿಷಯದಲ್ಲಿ 'ಆಟಮ್' ಗೆ ಪೂರ್ಣ ಸರಿಹೋಲುತ್ತಿತಿದ್ದರು. ಹುಡುಗಿಯರು ಇತರ ಮಾಸ್ತರರ ಎದುರಿನಲ್ಲಿ ಗುಡುಗಾಡುತ್ತಿದ್ದವರು, 'ಲೀಲಾಬಾಯಿ ದೇಶಪಾಂಡೆ B. A. ( Hons. ) B. T. (I Class)' ಎಂದಾಕ್ಷಣ ತಲೆ ಕೆಳಗೆ ಹಾಕುತ್ತಿದ್ದರು.