ಪುಟ:Hosa belaku.pdf/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವಿಜ್ಞಾನದ ವಿಷ

೧೦೫

"ಪಶು ರಾಕ್ಷಸ- ಧಿಕ್ಕಾರ”

ಪೋಲಿಸರ ಪಡೆ ಆ ತಂಡದತ್ತ ಧಾವಿಸಿತು. ಕ್ಷಣಮಾತ್ರದಲ್ಲಿ ಮತ್ತೆ ಶಾಂತತೆ ನೆಲಸಿತು. ಯಾಂತ್ರಿಕ ಸಾಧನದ ಬಲದ ಮೇಲೆಯೇ ಆ ಶಾಂತಿ ನೆಲಸಿತ್ತು. ಆದರೆ ಅದು ಸ್ಮಶಾನ ಶಾಂತಿಯಾಗಿ ಕಾಣುತ್ತಿತ್ತು. ಪೋಲಿಸ ಹವಾಲ್ದಾರ ಮುದುಕಿಯ ಹತ್ತಿರ ಬಂದು ಅವಳನ್ನು ಎಚ್ಚರಿಸಿದ:

"ಏ ಮುದಕೀ ಎತ್ತಾಗ ನೋಡತಿ? ಆ ಕೊಳವಿ ಕಡೆ ನೋಡು, ಒಳಗ ಮಾತಾಡಿದ್ದು ಇಲ್ಲಿ ಕೇಳಸ್ತೈತಿ!"

ಸುಬ್ಬಮ್ಮ ನಿರ್ಜಿವ ಯಂತ್ರದಂತೆ ತನ್ನ ಕಿವಿಗಳನ್ನು ಧ್ವನಿವಾಹಕ ಕರ್ಣಗಳತ್ತ ಹೊರಳಿಸಿದಳು.

ರಾಜನ ಭಾಷಣ ಅಲ್ಲಿ ಕೇಳುತ್ತಿತ್ತು : "ನಾನು ಈಗ ದೊಡ್ಡ ವಿಜ್ಞಾನಿಯಾಗಿ ಬಂದಿಲ್ಲ, ದೊಡ್ಡ ಸಂಶೋಧಕನಾಗಿ ಬಂದಿಲ್ಲ; ನಿಮ್ಮ ಊರವನಾಗಿ ಬಂದಿದ್ದೇನೆ. ನಿಮ್ಮವನಾಗಿ ಬಂದಿದ್ದೇನೆ. ನಮ್ಮ ಪ್ರಾಂತದವರು ಪರರಿಗೆ ಉಪಕಾರ ಮಾಡುವುದರಲ್ಲಿ ಹೆಸರಾಗಿದ್ದಾರೆ. ಈಗ ನಾನು ಹೊಸಯಂತ್ರದ ರಚನೆಯನ್ನು ಕಂಡು ಹಿಡಿದು ಪರರಿಗೆ ಉಪಕಾರ ಮಾಡಿದ್ದೇನೆ. ನಾನು ಕೂಡ ಇಂಥದೇ ಉಪಕಾರದ ಮೇಲೆ ಬೆಳೆದು ಇಂದು ಈ ಉನ್ನತ ಪದವಿಗೇರಿದ್ದೇನೆ. ನಾನು ನನ್ನ ಆತ್ಮವೃತ್ತ ಹೇಳುತ್ತ ಕೂಡ್ರುವದಿಲ್ಲ, ಆದರೂ ನನ್ನ ಜೀವನದಲ್ಲಿ ನಡೆದ ಒಂದು ಭಾಗ ಹೇಳಲೇಬೇಕು. --ನಾನು ಹುಟ್ಟಿ ಮೂರು ದಿನಗಳಲ್ಲಿಯೇ ನನ್ನ ತಾಯಿಯನ್ನು ಕಳೆದುಕೊಂಡೆ. ಆಗ ನೆರೆಮನೆಯ ಹೆಣ್ಣು ಮಗಳೊಬ್ಬಳು--ಅವಳ ಹೆಸರು ಸುಬ್ಬಮ್ಮ--ತನ್ನ ಒಂದು ವರುಷದ ಮಗುವನ್ನು ಬದಿಗಿರಿಸಿ ಆ ಮಗುವಿಗೆ ಅರೆಹೊಟ್ಟೆಯುಣಿಸಿ, ನನಗೆ ತನ್ನ ಎದೆ ಹಾಲುಣಿಸಿ ಬೆಳಸಿದಳು.–– "

ಸುಬ್ಬಮ್ಮನ ಕಣ್ಣುಗಳಲ್ಲಿ ನೀರು ಧಾರಾಳವಾಗಿ ಹರಿಯತೊಡಗಿತು. ಅವಳ ಸತ್ತ ಮಗುವಿನ ಭೂತ ಅವಳ ಎದುರು ನಿಂತು ಕೂಗಾಡತೊಡಗಿದಂತೆ ಭಾಸವಾಯಿತು. ಆ ಭೂತ ಕೂಗಿ ಕಿರುಚಿ ಹೇಳುತ್ತಿತ್ತು: "ಅವ್ವಾ, ನೀನು ಸ್ವಂತ ಮಗನಿಗೆ ಹಾಲುಣಿಸಲಿಲ್ಲ. ಒಂದು ಹಾವಿಗೆ ಹಾಲು ಹಾಕಿದಿ ! ಹಲ್ಲು ಕೀಳಿಸುವ ಸಾಮರ್ಥ್ಯವು ಇದ್ದರಷ್ಟೇ ಹಾವಿಗೆ ಹಾಲೆರೆಯಬೇಕು?