ಪುಟ:Hosa belaku.pdf/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಹೊಸ ಬೆಳಕು

ಲೀಲಾಬಾಯಿಯವರು ಅಷ್ಟೊಂದು ಉಗ್ರವಾಗಿರಲಿಲ್ಲ. ಕ್ಲಾಸಿನ ಹುಡುಗಿಯರ ಮೇಲೆ ತಮ್ಮ ಸ್ವಾಮಿತ್ವ ಸ್ಥಾಪಿಸಿದ್ದು ಕೇವಲ ತಮ್ಮ ಗಾಂಭಿರ್ಯಪೂರ್ಣ ಮುಖಮುದ್ರೆಯಿಂದ; ಮಿತಭಾಷಣದಿಂದ, ತಮ್ಮ ತೇಜಸ್ಸಿನಿಂದ ತುಂಬಿದ ಸುಂದರ ಮುಖದಿಂದ. ನಿಜವಾಗಿಯೂ ಲೀಲಾಬಾಯಿಯವರ ಮುಖದಷ್ಟು ಸುಂದರ ಮುಖ, ಆ ಊರಮಟ್ಟಿಗಾದರೂ ನೋಡಲು ಸಿಕ್ಕಲಾರದು ಎಂದು ಹೇಳಿದರೆ ಅತಿಶಯೋಕ್ತಿಯಾಗಲಾರದು. ತುಂಬುಗೆನ್ನೆ, ಮಾಟವಾದ ಹಣೆ, ಹಣೆಯ ಸುತ್ತು ಇಳಿಬಿದ್ದ ರೇಶಿಮೆಯಂತಿರುವ ಅವರ ಉಂಗುರುಗೂದಲು, ಪುಷ್ಟವಾಗಿ ಬೆಳೆದಿರುವ ಎದೆ, ಆ ಆಕರ್ಷಕವಾದ ಕಣ್ಣುಗಳು, ಪುಟಗೊಟ್ಟ ಚಿನ್ನದಂತಿರುವ ಮೈಬಣ್ಣ-ಇವೆಲ್ಲ ಅವರನ್ನು ಬೇಲೂರಿನ ಶಿಲಾಬಾಲಿಕೆಗೆ ಹೋಲಿಸಹಚ್ಚುತ್ತಿದ್ದುವು. ಲೀಲಾಬಾಯಿಯವರ ವಯಸ್ಸು ಮೂವತ್ತನ್ನು ದಾಟಿದ್ದರೂ, ಅದೇ ಅರಳಿದ ಚೆನ್ನೈದಿಲೆಯಂತೆ ಕಂಗೊಳಿಸುತ್ತಿದ್ದಿತು ಅವರ ದೇಹಸೌಂದರ್ಯ. ಜಾರ್ಜೆಟ್ ಸೀರೆ ಉಟ್ಟು ಅವರು ಕ್ಲಾಸಿನಲ್ಲಿ ಬಂದರೆ, ಅವರ ಪ್ರತಿ ಅಂಗಾಂಗದ ಏರು ಇಳಿವು, ಸೌಂದರ್ಯ ಪೂರ್ಣವಾಗಿ ಕಂಗೊಳಿಸುತ್ತಿದ್ದವು. ಇದೇ ಅವರ ವೈಶಿಷ್ಟ, ನೋಡುವವರನ್ನು ಬೆರಗುಗೊಳಿಸುತ್ತಿತ್ತು. ಅವರು ಕೇವಲ ದೈಹಿಕ ಸೌಂದಯ್ಯದಲ್ಲಿಯಷ್ಟೇ ಮೊದಲ ಕ್ರಮಾಂಕ ಪಡೆದಿರಲಿಲ್ಲ; ಬದ್ಧಿವತ್ತೆಯೂ ಅದರ ಜತೆಯಲ್ಲಿ ಸೇರಿಕೊಂಡಿತ್ತು.

ಕ್ಲಾಸಿನಲ್ಲಿ ಬಂದವರೇ ಲೀಲಾಬಾಯಿ ಕಥೆಯೊಂದನ್ನು ಓದಿ ತೋರಿಸಹತ್ತಿದರು. ಪುಸ್ತಕದ ಹೆಸರು “Fairy tales from Turkey” ಕತೆಯ ಹೆಸರು 'God's Gift' (ದೇವರ ಕೊಡುಗೆ) ಎಂದು. ಕತೆ ಸರಾಗವಾಗಿ ಓಡುತ್ತಿತ್ತು. ಆದರೆ ನಡುವೆ ಒಂದು ಶಬ್ದ ಬಂತು. ಒ೦ದರೆನಿಮಿಷ ಲೀಲಾಬಾಯಿಯವರು ಓದನ್ನು ನಿಲ್ಲಿಸಿದರು. ಸರಾಗವಾಗಿ ಸಾಗುವ ನದಿಗೆ ಆಣೆಕಟ್ಟು ಕಟ್ಟಿದಂತಾಯ್ತು. ಹೆಚ್ಚಾದ ನೀರು ಹೊರಚೆಲ್ಲಲೇ ಬೇಕಲ್ಲವೇ ? ಆ ಶಬ್ದಗಳ ಮೇಲಿಂದ ಅಲುಗದ ಅವರ ಕಣ್ಣುಗಳಂಚಿನಲ್ಲಿ ನೀರಹನಿಗಳು ಕಾಣಿಸಿಕೊಂಡುವು. ಮುಂದೆ ಕುಳಿತ ಹುಡುಗಿಯರಿಗೆ ಅದು ಕಾಣಿಸದೆ ಹೋಗಲಿಲ್ಲ. ಹುಡುಗಿಯರು ಏನೋ ' ರಹಸ್ಯ ' ಎಂದು ಮನದಲ್ಲಿಯೆ ತಿಳಿದುಕೊಂಡರು. ಆದರೆ ಒಳಗಣ ಧ್ವನಿಗೆ ಹೊರಬರುವುದು ಸಾಧ್ಯವಿರ