ಪುಟ:Hosa belaku.pdf/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೧೪

ಕಾಲ ಮಹಿಮೆ

ಆಗಿರಲಿಲ್ಲ ವಸಂತನೇ ಬಾಗಿಲನು ತೆಗೆದಿದ್ದ. ಆದರೆ ಕೇಶವರಾಯರು ಅವನನ್ನು ಮೊದಲು ಗುರುತಿಸದೇ ಹೋದರು. ವಸಂತನಲ್ಲಿ ಅಷ್ಟೊಂದು ಮಾರ್ಪಾಡು ಆಗಿ ಹೋಗಿತ್ತು. ಆದರೂ ತಮ್ಮ ಸೋದರಳಿಯನನ್ನು ಗುರುತಿಸುವದು ಅಸಾಧ್ಯವೇ? ಕೇಶವರಾಯರು ಅವನನ್ನು ಗುರುತಿಸಿ ಸಾಮೋಪಚಾರವಾಗಿ ಮಾತನಾಡಿಸಿದರು:

"ವಸಂತಾ, ಎಷ್ಟು ಸುಂದರನಾಗಿ ಬಿಟ್ಟಿದ್ದೀಯಪಾ, ಯಾವಾಗ ಬಂದೆ?"

"ತಾವು ಯಾರು ?"

ವಸಂತನ ಈ ಪ್ರಶ್ನೆಯಿ೦ದ ಕೇಶವರಾಯರು ನೆಲಕ್ಕೆ ಇಳಿದುಬಿಟ್ಟರು. ಆದರೂ ತಮ್ಮನ್ನು ಸಾವರಿಸಿಕೊಂಡು ಮತ್ತೆ ತೊದಲುತ್ತ ಹೇಳಿದರು:

"ನಾನು ಕೇಶವರಾಯಾ, ನಿನ್ನ ಮಾಮಾ, ಏನು ಗುರುತು ಹತ್ತಲಿಲ್ಲೇನು?"

"ಓಹೋ, ಕೇಶೂಮಾಮಾ ಏನು? ಬರ್‍ರಿ ಒಳಗ." ಎಂದು ಹೇಳಿ ಒಳಗೆ ಕರೆದೊಯ್ದು, ಕೂಡಿಸಿ, ಮತ್ತೆ–-

"ಕೂಡ್ರಿ, ನಾಯೀಗ ಅಪ್ಪನ್ನ ಕರಕೊಂಡು ಬರ್‍ತೀನಿ” ಎಂದು ಹೇಳಿ ವಸಂತ ಒಳಗೆ ಹೋದ.

ಮುಂದೆ ೫ ನಿಮಿಷಗಳ ನಂತರ ಮಾಧವರಾಯರು ಹೊರಬಂದ ಬದಿಯಲ್ಲಿಯೇ ಕುಳಿತರು. ನಮಸ್ಕಾರ ಕ್ಷೇಮಸಮಾಚಾರದ ಮಾತು ಮುಗಿದ ಮೇಲೆ ಕೇಶವರಾಯರೇ ತಮ್ಮ ಮುಖ್ಯ ಮಾತಿನತ್ತ ಹೊರಳಿದರು.

"ಈಗ ವಸಂತ ಹ್ಯಾಂಗಾದರೂ ೪ ತಿಂಗಳ ರಜಾ ತಗೊಂಡು ಬಂದಾನ ಮತ್ತು ಈಗ ಕಾರ್ತಿಕ ಮಾಸ, ಶುಭ ಮುಹೂರ್ತ ನೋಡಿ ಮದುವೆ ಮಾಡಿ ಬಿಡೋಣ"

"ಮದುವಿ, ಯಾರ ಕೂಡೋ? ಕನ್ಯಾ ಗಿನ್ಯಾ ಠರಾಯಿಸದೇ, ಲಗ್ನ ಒಮ್ಮೆಲೆ ಆಗಂದ್ರ ಹ್ಯಾಂಗಪಾ. ಈಗ ಎರಡು ಮೂರು ಕನ್ಯಾ ಬಂದು ಹೋಗಾವ, ಕನ್ಯಾ ಇನ್ನೂ ಅವನ ಮನಸಿಗೆ ಬಂದಿಲ್ಲ. ವರದಕ್ಷಿಣೇನೂ ನನ್ನ ಮನಸಿಗೆ ಬಂದಿಲ್ಲ."