ಪುಟ:Hosa belaku.pdf/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಹೊಸ ಬೆಳಕು

ಲಿಲ್ಲ. ಲೀಲಾಬಾಯಿಯವರ ಗಾಂಭೀರ್ಯದ ಬೇಲಿಯೇ ಅಷ್ಟು ಭದ್ರವಾಗಿತ್ತು, ತಡೆಹಿಡಿದ ವಾಕ್ಯ ಅಷ್ಟೊಂದು ಗಹನವಾಗಿರಲಿಲ್ಲ.

ಒಬ್ಬ ಕುರುಬರ ಹುಡುಗ ನೀರು ಕುಡಿಯುವುದಕ್ಕಾಗಿ ಬಾವಿಯಲ್ಲಿ ಇಳಿಯುತ್ತಾನೆ. ಅಲ್ಲಿ ಒಬ್ಬ ಕುರೂಪಿಯಾದ ರಾಕ್ಷಸಿ ಕಾಣಿಸಿಕೊಳ್ಳುತ್ತಾಳೆ. ಅವಳ ಒಂದು ಕೈಯಲ್ಲಿ ಒಬ್ಬ ಸುಂದರ ಯುವಕ, ಇನ್ನೊಂದು ಕೈಯಲ್ಲಿ ಒಬ್ಬ ಸುಂದರ ಯುವತಿ. ಆ ರಾಕ್ಷಸಿಗೆ ತಾನು ತುಂಬಾ ಸುಂದರಿ ಎನ್ನುವ ಹೆಮ್ಮೆ ಇರುತ್ತದೆ; ಅಲ್ಲಿ ನೀರು ಕುಡಿಯುವುದಕ್ಕೆ ಬಂದವರನ್ನೆಲ್ಲ, 'ಯಾರು ಸುಂದರರು?' ಎಂದು ಕೇಳುತ್ತಿರುತ್ತಾಳೆ. ಎಲ್ಲರೂ ಸತ್ಯ ಹೇಳುತ್ತಾರೆ, ಆ ರಾಕ್ಷಸಿಯ ಕೋಪಕ್ಕೆ ಬಲಿ ಬೀಳುತ್ತಾರೆ. ಈಗ ಕುರುಬರ ಹುಡುಗನಿಗೂ ಅದೇ ಪ್ರಶ್ನೆ ಕೇಳುತ್ತಾಳೆ ಆ ರಾಕ್ಷಸಿ: “Which of us is the more beautiful: this youth, this girl or, I,” (ನಮ್ಮಲ್ಲಿ ಯಾರು ಸುಂದರರು ? ಈ ಯುವಕನೋ ? ಈ ಯುವತಿಯೋ ಅಥವಾ ನಾನೋ?)

ಕುರುಬರ ಹುಡುಗ ಪೇಚಿನಲ್ಲಿ ಬೀಳುತ್ತಾನೆ. ಸತ್ಯ ಹೇಳಿದರೆ ಸಾಯುತ್ತಾನೆ; ಸುಳ್ಳಾಡಿದರೆ, ಮರಣಕ್ಕಂಜಿ ಸುಳ್ಳಾಡಿದ ಪಾಪ ಬರುತ್ತದೆ. ಆದರೂ ಹುಡುಗ ವಿಚಾರವಂತ, ವಿಚಾರಿಸಿ ಉತ್ತರ ಹೇಳಿಯೂ ಬಿಡುತ್ತಾನೆ:

""Whomsoever the heart loves is beautiful" (ಒಳ ಹೃದಯದಿಂದ ಪ್ರೀತಿಸಲ್ಪಟ್ಟ ವಸ್ತು ಸುಂದರವಾಗಿರುತ್ತದೆ.)

ಅವನು ಕೊಟ್ಟ ಉತ್ತರ ಸುಂದರವಾಗಿತ್ತು, ಆದರೆ ಆ ವಾಕ್ಯ ಲೀಲಾಬಾಯಿಯವರನ್ನು ಯೋಚನೆಗೆ ಈಡು ಮಾಡಿತ್ತು. ಅದೊಂದೇ ವಾಕ್ಯ ಅವರನ್ನು ತಡೆಹಿಡಿದು ನಿಲ್ಲಿಸಿತ್ತು. ಆ ಸ್ತಬ್ಧತೆ, ಅವರ ಗಾಂಭಿರ್ಯದ ಶಿಥಿಲತೆಗೆ ಎಡೆಮಾಡಿಕೊಟ್ಟಿತು. ಆ ಶಿಥಿಲತೆಯ ಉಪಯೋಗ ಪಡೆದುಕೊಂಡು, ಮೂಲೆಯಲ್ಲಿ ಕುಳಿತ ಕಿಡಿಗೇಡಿ ಮೇರಿ ಡಿಸೋಝಾ ಎದ್ದು ನಿಂತು ಪ್ರಶ್ನೆಯನ್ನು ಕೇಳಿದಳು:

"ಮ್ಯಾಡಮ್, ಒಂದು ಪ್ರಶ್ನೆ."
"ಕೇಳು” ಪುಸ್ತಕದತ್ತ ಇದ್ದ ಮುಖವನ್ನು ಮೇಲಕ್ಕೆತ್ತದೆ ಲೀಲಾಬಾಯಿ ಉತ್ತರಿಸಿದಳು.