ಪುಟ:Hosa belaku.pdf/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಹೊಸ ಬೆಳಕು

"ಪ್ರೇಮವಿವಾಹದ ನಂತರ ಗಂಡನಿಗೆ ಏನೋ ಆಗಿ ಅವನು ಕುರೂಪಿಯಾಗುತ್ತಾನೆ, ಆದರೆ Whomsoever the heart loves 1s beautiful ಎಂಬ ವಾಕ್ಯದ ಪ್ರಕಾರ ಆಗಲೂ ಆ ಹೆಂಡತಿಗೆ ಆ ವಿಕೃತ ಗಂಡ ಸುಂದರನಾಗಿಯೇ ಕಾಣುತ್ತಾನೆಯೇ ?"

ತಾರುಣ್ಯದ ಹೊಸ್ತಿಲಲ್ಲಿ ಆಗಲೇ ಕಾಲಿರಿಸಿದ ಕ್ಲಾಸಿನ ಹುಡುಗಿಯರಿಗೆ ಈ ತಮ್ಮ ಲೀಲಾಬಾಯಿಯವರ ಮೇಲಿನದೇ ಆದ ಪ್ರೇಮದೃಷ್ಟಾಂತ, ಅವರಲ್ಲಿ ತಡೆಹಿಡಿಯುವಷ್ಟು ನಗೆಯನ್ನು ಬರಿಸಿತು, ತತ್ ಕ್ಷಣ ಕ್ಲಾಸಿನಲ್ಲಿ ಗೇರುಸೊಪ್ಪೆಯ ಧಬಧಭೆಯ ಸಪ್ಪಳವಾಯಿತು ಅದು ಆ ಹುಡುಗಿಯರ ನಗು. ಲೀಲಾಬಾಯಿಯವರ ಮುಖ ಉಗ್ರವಾಯಿತು. ಗೌರವಾಗಿದ್ದ ಅವರ ಮುಖ ಮತ್ತಿಷ್ಟು ಬಣ್ಣ ಕಟ್ಟಿತು, ಕಿಡಿಕಿಡಿಯಾಗಿ ಒದರಿದರು: “Silence” (ಶಾಂತರಾಗಿರಿ).

–-ಧಬಧಭೆಯ ಪ್ರವಾಹವನ್ನು ಮಣ್ಣಿನ ಒಡ್ಡಿನಿಂದ ತಡೆಯಬಹುದೇ? ಲೀಲಾಬಾಯಿಯವರಿಗೆ ತಮ್ಮ ಐದು ವರುಷಗಳ ಸರ್ವಿಸಿನಲ್ಲಿ ಇಂತಹ ಪರಿಸ್ಥಿತಿಯನ್ನು ಎದುರಿಸುವುದು ಇದೇ ಮೊದಲು. ಹೊಸತಾಗಿ ಬಂದ ಅನುಭವ, ಮನುಷ್ಯನ ಹೃದಯವನ್ನು ಕಲಕಿಸಿ ಬಿಡುತ್ತದೆ ಕೈಯಲ್ಲಿರುವ ಪುಸ್ತಕವನ್ನು ಮುಚ್ಚಿ ಕ್ಲಾಸಿನಿಂದ ಹೊರಗೆ ನಡೆದು ಬಿಟ್ಟರು. ಕ್ಲಾಸಿನಲ್ಲಿ ಮತ್ತೆ ಸ್ಮಶಾನ ಶಾಂತತೆ ವ್ಯಾಪಿಸಿತು. ನೀರನ್ನು ತಡೆಹಿಡಿದರೆ ಅದರ ಅಬ್ಬರ ಹೆಚ್ಚು. ನಡುವಿನ ಅಡ್ಡ ಗೋಡೆಯನ್ನೇ ಕೆಡವಿದಾಗ ? ಕ್ಲಾಸಿನಲ್ಲಿಯ ನಗು ಎಲ್ಲಿಯೋ ಮಾಯವಾಯಿತು; ಅದರೆಡೆಯಲ್ಲಿ ಯಾವುದೋ ಅಂಜಿಕೆ ವ್ಯಾಪಿಸಿತ್ತು. ಆದರೂ ಮೇರಿ ಡಿಸೋಝಾನ ಧೈರ್ಯಕ್ಕೆ ತಲೆದೂಗಿದರು. ಹೌದು, ಧೈರ್ಯವೇ ಸರಿ, ಲೀಲಾಬಾಯಿಯವರ ಸಂಸಾರದ ಮಾತನ್ನೇ ಉದಾಹರಣೆಯಾಗಿ ತೆಗೆದುಕೊಂಡು ಪ್ರಶ್ನೆಯನ್ನು ಕೇಳುವುದೆಂದರೆ ಸಾಮಾನ್ಯವೇ !

ಕ್ಲಾಸಿನಿಂದ ಹೊರಬಿದ್ದವರೇ ಲೀಲಾಬಾಯಿಯವರು, ನೇರವಾಗಿ ಟೀಚರ್ಸ್ ರೂಮಿನಲ್ಲಿ ಬಂದು ಕುಳಿತರು. ಅವರ ಮನಸ್ಸಿಗೆ ಶಾಂತಿಬೇಕಿತ್ತು. ಕ್ಲಾಸಿನಲ್ಲಿಯ ಘಟನೆ, ಅವರ ಮಾನಸಿಕ ಸರೋವರದ ಸ್ತಬ್ಧ ನೀರನ್ನು ಕಲಕಿಸಿತ್ತು. ಏನು ಮಾಡಿದರೂ ಮನಸ್ಸಿನ ಅಸ್ವಸ್ಥತೆ ಮಾಯ