ಪುಟ:Hosa belaku.pdf/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಹೊಸ ಬೆಳಕು

ವಾಗಲಿಲ್ಲ ಹಾಗೆಯೇ ಎದ್ದು ತಣ್ಣೀರಿನಿಂದ ಮುಖ ತೊಳೆದುಕೊಂಡು, ತಲೆಗೂದಲನ್ನು ಸರಿಪಡಿಸುವುದಕ್ಕಾಗಿ ಕನ್ನಡಿಯ ಎದುರು ಬಂದು ನಿಂತರು. ತಮ್ಮ ಮುಖ ನೋಡಿ ತಾವೇ ದಿಗ್ಗಾಂತರಾದರು. ಅವರ ಮುಖದಿಂದ ಲಾವಣ್ಯ ಹೊರಸೂಸಿದಂತೆ ಕಾಣಿಸತೊಡಗಿತು. ಆದರೆ ಆ ಸುಂದರ ಪ್ರತಿಬಿಂಬವನ್ನು ಅವರಿಗೆ ನೋಡಲಾಗಲಿಲ್ಲ. ಅದು ತನ್ನ ಸದ್ಯಸ್ಥಿತಿಯನ್ನು ಅಣಕಿಸುವಂತೆ ತೋರಿತು. ಮನದ ಮೇಲೆ ಮಿದುಳಿನ ಸ್ವಾಮಿತ್ವ, ತಪ್ಪಿತೇನೋ! ಇಲ್ಲವಾದರೆ ಅವರು ತಮ್ಮ ಪ್ರತಿಬಿಂಬಕ್ಕೆ ಅಣಕಿಸಿ ದೂರ ಸರಿಯುತ್ತಿರಲಿಲ್ಲ. ಪಾಪ, ನಿರ್ಜಿವ ಕನ್ನಡಿ ! ಆದರೂ ಸೇಡು ತೀರಿಸಿಕೊಳ್ಳುವುದರಲ್ಲಿ ಕಡಿಮೆ ಇರಲಿಲ್ಲ. ಪುನಃ ಅಣಕಿಸಿಯೇ ಬಿಟ್ಟಿತು. ಲೀಲಾಬಾಯಿಯವರು ತಮ್ಮ ಸ್ಥಿತಿ ತೀರ ಅಸ್ವಸ್ಥವಾದಾಗ, ಆರಾಮ ಖುರ್ಚಿಯಲ್ಲಿ ಕುಳಿತು, ಮುಖದ ಮೇಲೆ ಅದೇ ಪುಸ್ತಕವನ್ನು ತೆರೆದು ಇಡಹೋದರು. ದುರ್ದೈವಕ್ಕೆ ಅದೇ ಪಾಠ ತೆರೆಯಬೇಕೇ, ಅದೇ ಕುಣಿಯಬೇಕೇ ?

"Whomsoever the heart loves is beautiful ”

ಆದರೆ ಈ ಸಲ ಲೀಲಾಬಾಯಿಯವರಿಗೆ ಸಿಟ್ಟು ಬರಲಿಲ್ಲ. ತೆರೆದ ಪುಸ್ತಕದಿಂದ ಮುಖವನ್ನು ಮುಚ್ಚಿಕೊಂಡರು.

ನಿದ್ದೆ ಬಾರದಾಗ ಕಣ್ಣನ್ನು ಮುಚ್ಚಿ ಮಲಗಿದರೆ ? -ಧಿಯೇಟರಿನಲ್ಲಿ ದೀಪವಾರಿಸಿದಂತೆ ಚಿತ್ರಪಟ ಸುರುವಾಗಿ ಬಿಡುತ್ತದೆ. ಲೀಲಾಬಾಯಿಯವರ ಸ್ಮೃತಿಪಟಲದ ಮೇಲೆ ಅವರ ಗತ ಜೀವನದ ಚಿತ್ರಪಟ ಸುಳಿಯತೊಡಗಿತು,

"-–ಆ ಘಟನೆ-ಮಧುರ ರಸನಿಮಿಷ ! ಹಾಯಸ್ಕೂಲಿನಲ್ಲಿ ತಾವು ಮ್ಯಾಟ್ರಿಕಿನಲ್ಲಿ ಕಲಿಯುವ ದಿನ. ತಮ್ಮ ಕ್ಲಾಸಿನ ದೇಶಪಾಂಡೇ ಮಾಸ್ತರರು ತಾವು ಅವರ ಪವಿತ್ರ ಪ್ರೇಮಪಾಶದಲ್ಲಿ ಸಿಲುಕಿದ್ದು. ಆ ಘಟನೆ ಮದುವೆಯಲ್ಲಿ ಪರಿಣಮಿಸಿತು. ನೋಡಿದ ಜನರೆಲ್ಲ “ಲಕ್ಷ್ಮೀನಾರಾಯಣ ಜೋಡಿ, ರಾಧಾ-ಕೃಷ್ಣರ ಜೋಡಿ” ಎಂದು ಬೆರಳು ಕಚ್ಚುತ್ತಿದ್ದರು. ತಾವು ಊರಲ್ಲಿ ಸಾಯಂಕಾಲ ತಿರುಗಾಡಿ ಮನೆಗೆ ಬಂದರೆ, ಮನೆಯಲ್ಲಿಯ ಕೆಲಸಗಿತ್ತಿ, ದೃಷ್ಟಿ ತೆಗೆದು ಬೆಂಕಿಯಲ್ಲಿ ಸಾಸಿವೆಕಾಳು ಒಗೆದರೆ, ಮನೆಯಲ್ಲಿ ಕಾಲಿಡಲಾಗದಷ್ಟು ಹೊಲಸು ವಾಸನೆ ಬರುತ್ತಿತ್ತು. ದೇಶಪಾಂಡೇ ಮಾಸ್ತರರು