ಪುಟ:Hosa belaku.pdf/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಹೊಸ ಬೆಳಕು

ಆದರ್ಶವಾದಿಗಳು, ತುಂಬಾ ಬುದ್ಧಿವಂತರು, ಸುಂದರರು, ಅವರಿಗೆ ಸಮೀಪದ ಬಳಗದವರಾರೂ ಇರಲಿಲ್ಲ. ತನ್ನ ಸಹೃದಯಪೂರಿತ ಪ್ರೇಮ, ಅವರ ರುಕ್ಷ ಜೀವನದಲ್ಲಿ ಗಂಗೆಯ ಮಹಾಪೂರದಷ್ಟು ಸ್ವಾರಸ್ಯವನ್ನು ಹುಟ್ಟಿಸಿತ್ತು. ಅರೆನಿಮಿಷವಾದರೂ ಅವರು ತನ್ನನ್ನು ಬಿಟ್ಟು ಕದಲುತ್ತಿರಲಿಲ್ಲ. ತಾನಾದರೂ ಎಲ್ಲಿ ? ಎರಡೂ ಕೈಗಳೂ ಕೂಡಿದಾಕ್ಷಣವೇ ಚಪ್ಪಾಳೆಯಲ್ಲವೇ? ತನ್ನ ಮನೆ––ಮನೆ ಅಲ್ಲ––ನಂದನ ವನ ! ಆ ಸುಖ ಆ ಶಾಂತಿ––

––ಆದರೆ ಆ ಸುಖ ಶಾಂತಿ, ಬಿರುಗಾಳಿಯ ಪೂರ್ವದ ಚಿಹ್ನೆಯೆಂದು ಆಗ ತನಗೆಲ್ಲಿ ಅರಿವಿತ್ತು ? ಹಗಲು ಹೋದಾಕ್ಷಣ ರಾತ್ರಿಯಾಗುವುದು ಸೃಷ್ಟಿಯ ನಿಯಮ ಸರಿ. ಆದರೆ, ಬಂದ ಆ ಕಾಳರಾತ್ರಿ ಮತ್ತೆ ಸರಿಯದೆ ನಿಂತರೆ ? ತನ್ನ ಜೀವನದಲ್ಲಿ ಮತ್ತೆ ಹಗಲು ಯಾವಾಗ ? ಹತ್ತು ವರ್ಷದ ಹಿಂದಿನ ಪ್ರಸಂಗ: ಮದುವೆಯಾಗಿ ಮೂರು ವರ್ಷವೂ ಆಗಿರಲಿಲ್ಲ. ಆ ಸುಡುಗಾಡು ಗೋಕಾಕ ಪ್ರವಾಸ....... ಮೋಟಾರಿನ ಅಪಘಾತ ! ಒಂದು ಕಾಲು, ಒಂದು ಕೈ, ಮುಖಕ್ಕೆ ಗಾಯ ! ತನ್ನ ಗಂಡನಿಗಾದ ಈ ದೈನ್ಯಾವಸ್ಥೆ-ಒಂದು ಸಲ ತನ್ನ ಮನದಲ್ಲಿ, ಆತ್ಮಹತ್ಯೆಯ ವಿಚಾರವೂ ಬಂದಿತ್ತು. ಅಪಾಯದಿಂದ ಗುಣವಾಗದಿದ್ದರೆ ಬಾಂವಿ ಬೀಳುವೆನೆಂದು ಶಪಥವನ್ನು ಮಾಡಿದ್ದೆ. ಆದರೆ ವಿಸ್ಮೃತಿ ಮಾನಸಿಕ ರೋಗಕ್ಕೊಂದು ರಾಮಬಾಣ ಔಷಧವೆಂದು, ಆನಂತರ ತಿಳಿಯಿತು. ಪ್ರೇಮದ ಉದ್ವೇಗ ಬರಬರುತ ಕಡಿಮೆಯಾಗತೊಡಗಿತು. ಗಂಡನ ಕುಂಟು ದೇಹ, ವಿಕೃತ ಮುಖ –– ಛೇ, ಏನೋ ಒಂದು ತರದ ಜುಗುಪ್ಪೆ ಹುಟ್ಟಿಸಿತು. ಬರಬರುತ್ತ ಅವರ ವಿಷಯದಲ್ಲಿ ಅನಾದರ ಹೆಚ್ಚತೊಡಗಿತು ಮುಖ ನೋಡುವುದಕ್ಕೆ ಮನಸ್ಸಾಗಲಿಲ್ಲ-ಮೈ ಮುಟ್ಟುವುದಂತೂ ಬೇರೆ ಉಳಿಯಿತು. ಯಾವ ಸುಖಸಂಪತ್ತುಗಳಿದ್ದರೇನು?––ಆ ಹಸಿವು! ಹಸಿವನ್ನು ಹಿಂಗಿಸಿಕೊಳ್ಳಬಹುದಿತ್ತು; ಆದರೆ ಹುಲಿ ಹಸಿದರೆ––"

ಭವಿಷ್ಯದ ಭೀಕರ ಭೂತ ಅವಳ ಮ೦ದೆ ಥೈ ಥೈ ಕುಣಿದಾಡತೊಡಗಿತು. ತಾಸು ಮುಗಿದ ಗಂಟೆಯ ಸಪ್ಪಳವೂ ಅವಳಿಗೆ ಕೇಳಿಸಲಿಲ್ಲ. ಟೀಚರ್ಸ್ ರೂಮಿನಲ್ಲಿ ಇತರ ಮಾಸ್ತರರು ಬಂದ ಸಪ್ಪುಳವಾದಾಗಲೇ ಅವಳಿಗೆ ಎಚ್ಚರು ಬಂದಿತು. ಲೀಲಾಬಾಯಿ. ಮುಖದ ಮೇಲಿನ ಪುಸ್ತಕವನ್ನು