ಪುಟ:Hosa belaku.pdf/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಹೊಸ ಬೆಳಕು

ತೆಗೆದು ದೂರ ಸರಿಸಿದಳು. ಎದುರಿನಲ್ಲಿಯೇ ಮುಜುಮ್‍ದಾರ ಮಾಸ್ತರರು ನಿಂತಿದ್ದರು. ತಮ್ಮನ್ನು ನೋಡಿದಾಗ ಮಾತನಾಡಿಸದೇ ಇರುವುದು ಸಭ್ಯತನಕ್ಕೆ ಸಲ್ಲದ ವಿಷಯವೆಂದು, ಮುಜುಮ್‍ದಾರರು “ಏನು ಮನೆಯಲ್ಲಿ ನಿದ್ರೆ ಆಗಲಿಲ್ಲವೇ ? ” ಎಂದು ತಮ್ಮ ಸರಲ-ಹಾಸ್ಯಯುಕ್ತ-ಶೈಲಿಯಲ್ಲಿ ಕುಶಲ ಪ್ರಶ್ನೆ ಮಾಡಿದರು.

ಲೀಲಾಬಾಯಿಯವರು ತಮ್ಮನ್ನು ಸಾವರಿಸಿಕೊಂಡು ಏಳಲಿಲ್ಲ; ಕುಳಿತಲ್ಲಿಯೇ ಕುಳಿತು "ಹೌದು" ಎಂದರು. ಮಾತು ಮುಗಿದೊಡನೆಯೆ ಮುಜುಮ್‍ದಾರರು ಬೇರೆಯ ಕಡೆಗೆ ಹೊರಳಿದರು. ಆದರೆ ಲೀಲಾಬಾಯಿಯವರ ದೃಷ್ಟಿ ಅವರ ಮೇಲಿಂದ ಕದಲಲಿಲ್ಲ. ಬಿಕ್ಕೆ ಬೇಡುವವನಿಗೆ ಪಕ್ವಾನ್ನದ ಎಲೆಯನ್ನು ಮುಂದೆ ಮಾಡಿದರೆ ! ಹೌದು, ಒಂದು ವಿಷಯದಲ್ಲಿ ಲೀಲಾಬಾಯಿಯವರು ಬಿಕ್ಕೆಯವರೇ ಆಗಿದ್ದರು ಗಂಡನ ವಿಕೃತ ಮುಖ, ಕುಂಟು ದೇಹ ಅವರಲ್ಲಿ ಜುಗುಪ್ಪೆ ಹುಟ್ಟಿಸಿತ್ತು.

ಬೇಡದ ವಸ್ತುವನ್ನು ಆಹಾರದ ತಟ್ಟೆಯಲ್ಲಿ ಬಡಿಸಿದರೆ, ಕೆಲ ಹುಡುಗರು ಅದನ್ನು ಮುಟ್ಟುವುದಿಲ್ಲ. ಪಾಲಿಗೆ ಬಂದದ್ದೇ ಪಂಚಾಮೃತವೆನ್ನುವ ಸ್ವಭಾವ ಇವರದಲ್ಲ. ಕಾಜಿನ ಭರಣಿಯಲ್ಲಿ ತೆಗೆಯಲು ಬಾರದ ಹಾಗೆ ಭದ್ರವಾಗಿರಿಸಿದ ಹೋಳಿಗೆಯನ್ನು ಕಂಡಾದರೂ ಸಂತೋಷಪಟ್ಟಾರು; ಆದರೆ ಎಲೆಯಲ್ಲಿ ಬಡಿಸಿದ್ದನ್ನು ಕೈಯಿಂದ ಮುಟ್ಟರು. ಇಂಥವರ ಸಾಲಿಗೇ ಲೀಲಾಬಾಯಿಯವರೂ ಸೇರಿದ್ದರು––ಆದರೆ ತೀರ ಹಸಿವಾದಾಗ––ಉಪವಾಸದಿಂದ ಸಾಯುವ ಜನರೂ ಇದ್ದಾರೆ; ಅಥವಾ ಭರಣಿಯನ್ನು ಒಡೆದು ಹೋಳಿಗೆಗೆ ಕೈ ಹಾಕುವ ಸಾಹಸಿಗಳೂ––

ಹತ್ತು ನಿಮಿಷಗಳ ಸೂಟಿ ಮುಗಿಯಿತು. ಶಾಲೆಯ ಜವಾನ ಘಂಟೆ ಬಾರಿಸಿ ತನ್ನ ಕರ್ತವ್ಯವನ್ನು ನೆರವೇರಿಸಿದ. ಎಲ್ಲ ಮಾಸ್ತರರೂ ತಮ್ಮ ಕ್ಲಾಸಿಗೆ ಹೋದರು. ಆದರೆ ಲೀಲಾಬಾಯಿಯವರು ತಲೆ ನೋಯುತ್ತದೆಂದು ಹೇಳಿ, ಮನೆಯ ದಾರಿ ಹಿಡಿದರು. ನಡಿಗೆ ಮಾತ್ರ ಸಾವಧಾನವಾಗಿ ಸಾಗುತ್ತಿತ್ತು; ಶೀಘ್ರತೆ ಆ ನಡಿಗೆಯಲ್ಲಿ ಬರಲು ಸಾಧ್ಯವಿರಲಿಲ್ಲ. ಶೀಘ್ರತೆಗೆ ಆಮಂತ್ರಣ ಕೊಡಲು ಮನೆಯಲ್ಲಿ ಆಕರ್ಷಕತೆ ಇರಲಿಲ್ಲ. ಲೀಲಾಬಾಯಿಯವರ ದಾಂಪತ್ಯ ಜೀವನದಲ್ಲಿ ಒಂದು ಬದಿ ಕಮರಿ ಹೋದಂತೆ ಭಾಸವಾಗು