ಪುಟ:Hosa belaku.pdf/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಹೊಸ ಬೆಳಕು

ಲೀಲಾಬಾಯಿಯವರು ಮನೆಯ ಬಾಗಿಲಿಗೆ ಬಂದಾಕ್ಷಣ, ಮನೆಯ ಕೆಲಸಗಿತ್ತಿ ಸ್ವಾಗತಿಸಿದಳು. ಲೀಲಾಬಾಯಿಯವರು ನೇರವಾಗಿ ತಮ್ಮ ಕೋಣೆಗೆ ನಡೆದರು. ದೇಶಪಾಂಡೆ ಮಾಸ್ತರರು ಚಕ್ರದ ಕುರ್ಚಿಯಲ್ಲಿ ಕುಳಿತವರು, ತಮ್ಮ ಹೆಂಡತಿ ಬಂದದ್ದನ್ನು ತಿಳಿದು, ಒಂದೇ ಕೈಯಿಂದ ಕುರ್ಚಿಯ ಗಾಲಿಯನ್ನು ತಿರುಗಿಸಿಕೊಳ್ಳುತ್ತ, ಕೋಣೆಗೆ ಬಂದರು. ಕೆಲಸಗಿತ್ತಿ ಅವರಿಗೆ ಸಹಾಯಮಾಡಿ, ಅವರನ್ನು ಬಾಯಿಯವರ ಕೋಣೆಗೆ ಕಳಿಸಿ ತನ್ನ ಕೆಲಸಕ್ಕೆ ––ಅಡುಗೆಯ ಮನೆಯ ಕಡೆಗೆ-- ನಡೆದಳು. ಗಂಡ ತನ್ನ ಕೋಣೆಯಲ್ಲಿ ಬಂದದ್ದನ್ನು ನೋಡಿ ಲೀಲಾಬಾಯಿಗೆ ತುಂಬ ಆಶ್ಚರ್ಯವಾಯಿತು. ಗಂಡಹೆಂಡಿರ ಕೋಣೆಗಳು ಬೇರೆಯಾಗಿ ಬಹು ದಿನಗಳಾಗಿದ್ದುವು. ಈಗ ೭-೮ ದಿನಗಳಿಂದ ಲೀಲಾಬಾಯಿ ತನ್ನ ಗಂಡನ ಮುಖ ನೋಡುವುದನ್ನೂ ತಪ್ಪಿಸಿಕೊಂಡಿದ್ದಳು. ಹೆಂಡತಿಯ ಮನೋಗತವನ್ನು ಅನುಭವಗಳ ಮೇಲಿಂದ ಅರಿತ ದೇಶಪಾಂಡೇ ಮಾಸ್ತರರೂ, ಹೆಂಡತಿಯ ಮನಸ್ಸಿಗೆ ಬಾರದ ಕೆಲಸಕ್ಕೆ ಕೈ ಹಾಕುತ್ತಿರಲಿಲ್ಲ. ಪರಾವಲಂಬಿಗೆ ಹೊಟ್ಟೆ ತುಂಬಿದರಾಯಿತು; ಅದೇ ದೊಡ್ಡದು !

ದೇಶಪಾಂಡೆ ಮಾಸ್ತರರು ಒಳಗೆ ಬಂದ ಕೂಡಲೆ, ಒಂದು ಸಲ ಲೀಲಾಬಾಯಿ ಅವರೆಡೆಯಲ್ಲಿ ತೀಕ್ಷ್ಣದೃಷ್ಟಿ ಬೀರಿ ಗುಡುಗಿದರು:

"ಏನು ಬೇಕಾಗೇದ ನಿಮಗ ? ಒಳಗ ಕೆಲಸದಾಕಿ ಇದ್ದಾಳ ! ಏನಾದರೂ ಬೇಕಾದರೆ ಅಲ್ಲೇ ಇಸಕೊಳ್ಳಿರಿ !”

"ನನಗೇನೂ ಬೇಡ ! ಒಂದೇ ಒಂದು ಪ್ರಾರ್ಥನೆ ಕೇಳು ! ” ಒಂದು ಕೈಯಿಂದ ಕೋಣೆಯ ಬಾಗಿಲನ್ನು ಮುಚ್ಚುತ್ತಲೇ ದೀನಸ್ವರದಲ್ಲಿ ದೇಶಪಾಂಡೆಯವರು ಉತ್ತರಿಸಿದರು.

ದೇಶಪಾಂಡೆಯವರು ಬಾಗಿಲನ್ನು ಮುಚ್ಚುತ್ತಿದ್ದುದನ್ನೂ “ ಒಂದು ಪ್ರಾರ್ಥನೆ ” ಎಂದು ಕೇಳಿಕೊಳ್ಳುತ್ತಿರುವುದನ್ನೂ ನೋಡಿ, ಲೀಲಾಬಾಯಿಯವರ ಹೆಣ್ಣಹೃದಯ ಅಂಜಿತು. ಆದರೆ ಅಂಗಹೀನತೆಯನ್ನು ನೋಡಿ ಧೈರ್‍ಯದಿಂದಲೇ ಪುನಃ ಕೇಳಿದರು:

"ಏನು ? ಬೇಗ ಹೇಳಿ ಮುಗಿಸಿರಿ ! ನನಗೆ ತುಂಬಾ ಕೆಲಸವಿದೆ.