ಪುಟ:Hosa belaku.pdf/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೨

ಹೊಸ ಬೆಳಕು

ದಾರ್ ಮಾಸ್ತರರ ಚಿತ್ರ ಸುಳಿಯಿತು; ಸಾಕ್ಷಾತ್ ಮದನನ ಮೂರ್ತಿ! ಎತ್ತರದ ನಿಲುವು, ಹರವಾದ ಎದೆ, ಮುಗುಳು ನಗೆಯ ಮುಖ, ನಿಷ್ಕಪಟ ಹೃದಯ. ಮುಜುಮದಾರರು ಆ ಶಾಲೆಗೆ ಬಂದು ಕೇವಲ ನಾಲ್ಕು ತಿಂಗಳಾಗಿದ್ದುವು. ಅವರ ಮನೆತನದ ಸ್ಥಿತಿ ಲೀಲಾಬಾಯಿಯವರಿಗಷ್ಟೇ ಅಲ್ಲ; ಉಳಿದಾವ ಮಾಸ್ತರರಿಗೂ ತಿಳಿದಿರಲಿಲ್ಲ. ಆದರೆ ಅವರ ಪತ್ನಿ ಸುಶಿಕ್ಷಿತೆ ಎಂಬುದನ್ನು ಅವರ ಬಾಯಿ೦ದಲೇ ಕೇಳಿದ್ದರು. ಮುಜುಮ್‍ದಾರರ ಪತ್ನಿ M.B.B.S. ಕೋರ್ಸಿಗೆ ಹೋಗಿ ಮೂರು ವರುಷ ಕಲಿತು ಅರ್ಧಕ್ಕೆ ತಿರುಗಿ ಬಂದಿದ್ದರಂತೆ. ' ಹಾಗೇಕೆ ?' ಎಂದು ಒಂದು ಸಲ ಲೀಲಾಬಾಯಿಯವರು ಕೇಳಿದ್ದರು. "ನಾನು ಲಗ್ನವಾದ ಮೇಲೆಯೇ ಅವಳನ್ನು ಡಾಕ್ಟರ್ ಕೋರ್ಸಿಗೆ ಕಳಿಸಿದ್ದೆ.” ಎಂದು ಮುಜುಮ್‍ದಾರ್ ಮಾಸ್ತರರು ಉತ್ತರಿಸಿದ್ದರು. ಹಾಗಾದರೆ ಪೂರ್ತಿಯಾಗಿ ಕಲಿಸಲಿಲ್ಲವೇಕೆ ? ” ಎಂದು ಮರುಪ್ರಶ್ನೆ ಕೇಳಿದ್ದರು.

“ ತೊಟ್ಟಿಲು ಕಟ್ಟುವ ಸಮಯ––"

ಅರ್ಧಕ್ಕೆ ಮಾತು ನಿಲ್ಲಿಸಿ ಮುಜುಮ್ದಾರರು ಮನೆಯ ಕಡೆ ತೆರಳಿದ್ದರು.

ಶಾಲೆ ಬಿಟ್ಟಾಕ್ಷಣ ಮುಜಮ್‌ದಾರರು ಉಳಿದೆಲ್ಲ ಮಾಸ್ತರರಂತೆ ಟೀಚರ್ಸ್ ರೂಮಿನಲ್ಲಿ ಹರಟೆ ಹೊಡೆಯುವುದಕ್ಕೆ ಕೂಡುತ್ತಿರಲಿಲ್ಲ. ಶಾಲೆ ಬಿಟ್ಟ ಗಂಟೆಯಾದಾಕ್ಷಣ, ಮನೆಯಕಡೆ ತೆರಳುತ್ತಿದ್ದರು “ ಅಬ್ಬಾ, ಏನದು ಪತ್ನಿ ಪ್ರೇಮ ? ” ಎಂದು ಲೀಲಾಬಾಯಿಯವರಿಂದ ಹಿಡಿದು ಎಲ್ಲ ಮಾಸ್ತ್ರರರೂ ಅವರನ್ನು ಚೇಷ್ಟೆ ಮಾಡುತ್ತಿದ್ದರು. ಒಂದು ದಿನ ಲೀಲಾಬಾಯಿ ಧೈರ್ಯಮಾಡಿ ಅವರನ್ನು ಕೇಳಿಯೇ ಬಿಟ್ಟಿದ್ದರು:

"ನೀವು ಇಷ್ಟು ಪತ್ನಿಯ ಮೇಲೆ ಪ್ರೇಮ ಮಾಡುತ್ತೀರಲ್ಲಾ ! ಅವಳು ಅಷ್ಟು ಸುಂದರಿಯಾಗಿದ್ದಾಳೆಯೇ? ”
"ಹೌದು, ನನ್ನ ದೃಷ್ಟಿಯಲ್ಲಂತೂ ಅವಳನ್ನು ಸರಿಹೋಲುವವರು ಯಾರೂ ಇಲ್ಲ ! ”

ಮುಜುಮ್ದಾರರ ಉತ್ತರ ಕೇಳಿ ಲೀಲಾಬಾಯಿ ಒಳಗೊಳಗೇ ನಿರಾಶರಾಗಿ ಬಿಟ್ಟಿದ್ದರು. ಆದರೂ ಮುಜುಮ್‌ದಾರರ ಬಗೆಯ ಹುಚ್ಚು ಅವರ