ಪುಟ:Hosa belaku.pdf/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಎಷ್ಟೋ ಸಲ, ತಾನು ಚಿಕ್ಕವನಿರುವಾಗಲೇ ಗೋಪಾಲ ಸ್ವಾಮಿಯವರ ಮನೆಗೆ ಹೋಗಿ ಬರುತ್ತಿದ್ದ. ಆಗಿನಿಂದಲೇ ಗೋಪಾಲ ಸ್ವಾಮಿಯವರ ಕಠೋರ ಧಾರ್ಮಿಕತೆಯ ಅರಿವು ತನಗಾಗಿದೆ. ಊರಲ್ಲಿ ಯಾವದೇ ಧಾತ್ಮಿಕ ಕಾರ್ಯಗಳಾದರೆ, ಅವೆಲ್ಲವೂ ಧರ್ಮಮಾರ್ತಂಡ ಗೋಪಾಲಸ್ವಾಮಿಯವರ ನೇತ್ರತ್ವದಲ್ಲಿಯೇ ಜರುಗಬೇಕು. ಮೈಸೂರಿನ ಸಂಸ್ಕೃತಿ ಸಂರಕ್ಷಣ ಸಂಘಕ್ಕೆ ಗೋಪಾಲಸ್ವಾಮಿಯವರೇ ಮೊದಲಿನಿಂದಲೂ ಅಧ್ಯಕ್ಷರಾಗಿದ್ದರು. ಮುಂದೆ ಅವರು ತಮ್ಮ ಊರಿಂದ ಚನ್ನಪಟ್ಟಣ ತಾಲ್ಲೂಕು ಆಫೀಸರರಾಗಿ ವರ್ಗಾ ಯಿಸಲ್ಪಟ್ಟರು. ಆಗಲೇ ಅವರ ಮಗಳು ವನಜಾಕ್ಷಿ ತಂದೆಯ ಜತೆಯಲ್ಲಿ ಚನ್ನಪಟ್ಟಣಕ್ಕೆ ತೆರಳಿದಳು ವನಜಾ ಸ್ವಭಾವತಃ ಮುದ್ದು ಹುಡುಗಿ, ಕಪಟವನ್ನರಿಯದ ಮುಗ್ಧ, ಸ್ವಭಾವ ಸ್ವಲ್ಪ ಹುಡುಗಾಟದ್ದಾದರೂ ಸಾಕ್ಷಾತ್ ದಯೆಯ ಮೂರ್ತಿಯಾಗಿದ್ದಳು. ಮುಂದೆ ತಾನು ತನ್ನ ಊರಲ್ಲಿಯೇ ಕಲಿತು ಮ್ಯಾಟ್ರಿಕ್ ಪರೀಕ್ಷೆಗೆ ಕಟ್ಟಿ ಪಾಸಾದೆನು. ನವಕರಿ ಸಿಗದ ದಿನದಲ್ಲಿ ಪಾಸಾದರೇನು, ಬಿಟ್ಟರೇನು, ತನಗೆ ತಂದೆ ತಾಯಿಗಳೂ ಇರಲಿಲ್ಲ ಪಿತ್ರಾರ್ಜಿತ ಆಸ್ತಿಯೂ ಇರಲಿಲ್ಲ. ತಾನು ವಾರದ ಮನೆಯ ಅನ್ನವನ್ನುಂಡೇ ಮ್ಯಾಟ್ರಿಕ್ ಪರೀಕ್ಷೆಯವರೆಗೆ ಕಲಿತಿದ್ದೆ. ಧರ್ಮಮಾರ್ತಂಡ ಗೋಪಾಲಸ್ವಾಮಿಯವರಲ್ಲಿಯೂ ಕೆಲದಿನ ಉಂಡು ಅವರಿಗೂ ಋಣಿಯಾಗಿದ್ದೆ. ಶಾಲೆ ಕಲಿಯುವದು ಮುಗಿದ ಮೇಲೆ ಅನ್ನ ಹಾಕುವವರಾರು? ಆಗ ತನಗೆ ಮತ್ತೆ ನೆನಪಾದದ್ದು ಚನ್ನಪಟ್ಟಣದ ತಾಲ್ಲೂಕು ಆಫೀಸರ ಧರ್ಮಮಾರ್ತಂಡ ಗೋಪಾಲಸ್ವಾಮಿಯವರು.-

ನವಕರಿಗಾಗಿ ಧರ್ಮಮಾರ್ತಂಡ ಗೋಪಾಲ ಸ್ವಾಮಿಯವರ ಕಡೆಗೆ ಬಂದೆ, ಆಗ-

"ಏನು ನೌಕರಿಗಾಗಿ ಬಂದೆಯಾ? ಯಾರು ನೀನು?" ವಾರದಲ್ಲಿ ಒಂದು ಸಲ ಅನ್ನವನ್ನಿಕ್ಕುತ್ತಿದ್ದರೂ ತನ್ನ ನನಪನ್ನೇ ಮರೆತು ಹೋದ ಗೋಪಾಲಸ್ವಾಮಿಯವರು ಗಂಭೀರವಾಗಿ ತನಗೆ ಪ್ರಶ್ನೆ ಮಾಡಿದ್ದರು. ಅದಕ್ಕೆ ತಾನು–

"ಹೌದು ಸ್ವಾಮಿ, ತಾವು ನನ್ನನ್ನು ಮರೆತಿರಬಹುದು ನಾನು ನಿಮ್ಮಲ್ಲಿ ವಾರದ ಊಟಮಾಡಿ, ವಿದ್ಯಾರ್ಜನೆ ಮಾಡಿದ ಬಡ ಹುಡುಗ ಸುಬ್ಬ."