ಪುಟ:Hosa belaku.pdf/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೆಳಗಿನ ನೆರಳು

೨೯

"ಆದರೆ ನಾವಿಬ್ಬರೂ ಲಗ್ನದ ವಚನದಿಂದ ಬಂಧಿತರಾಗಿದ್ದೇವೆ. ನಮ್ಮಿಬ್ಬರಲ್ಲಿ ಮಾನಸ ವಿವಾಹ ಯಾವಾಗಲೋ ನಡೆದು ಹೋಗಿದೆ. ಕೇವಲ ದೈಹಿಕ ಸಂಬಂಧಕ್ಕಾಗಿ ನಾಲ್ಕು ಜನರ ಕಣ್ಣೆದುರಿನಲ್ಲಿ ಲಗ್ನವನ್ನು ಮಾಡಬೇಕಾಗಿದೆ ಅಷ್ಟೆ."

"ಧರ್ಮಭ್ರಷ್ಟ! ನನ್ನೆದುರಿನಲ್ಲಿ ಇವೆಲ್ಲ ಮಾತನಾಡ್ತೀಯಾ? ಧರ್ಮಲಂಡರಿಗೆ ನನ್ನ ಆಫೀಸಿನಲ್ಲಿ ಪ್ರವೇಶವಿಲ್ಲ. ಇಂದೇ, ಇದೇ ಹೊತ್ತಿಗೆ ಹೊರಬೀಳು, ನಿನ್ನ ನೌಕರೀ ಇಂದೇ ಮುಕ್ತಾಯ. ಇಷ್ಟೇ ಅಲ್ಲ ಕೇಳು. ನಿನ್ನದು ಬ್ಯಾಡ್ ಕಾಂಡಕ್ಟ ಅಂತ ಜಾಹೀರಪಡಿಸುವೆ. ಮತ್ತೆಲ್ಲಿಯೂ ನಿನಗೆ ನೌಕರಿ ಸಿಕ್ಕದು. ಹೊಟ್ಟೆಗೆ ಕೂಳಿಲ್ಲದೆ ಚಡಪಡಿಸಿ ಸಾಯು. ಧರ್ಮಲಂಡರಿಗೆ ಇದೇ ಶಿಕ್ಷೆ"

"ಧರ್ಮಲಂಡ ನಾನಲ್ಲ--ಆದರೆ--ಇರಲಿ. ಈಗ ನಾನು ನಿಮ್ಮ ನವಕರನಲ್ಲ. ಹೇಳಬೇಕೆಂದರೆ ಬೇಕಾದಷ್ಟನ್ನೂ ಹೇಳಬಹುದು. ಆದರೆ ನಿಮ್ಮ ಜತೆಯಲ್ಲಿ ಮಾತನಾಡುವ ಇಚ್ಛೆ ನನಗಿಲ್ಲ. ಧರ್ಮದ ಹೆಸರಿನಲ್ಲಿ ನೂರಾರು ಜನರನ್ನು ಅಧರ್ಮಕ್ಕೆ ಎಳೆಯುತ್ತಿದ್ದೀರಿ."

"Shut up. Get out."
"ಬರುವೆ, ನಮಸ್ಕಾರ!"

ಸುಬ್ಬ ಸಾಹೇಬರ ಕೋಣೆಯಿಂದ ಹೊರಬರುವ ಸದ್ದನ್ನು ಕೇಳಿ, ಹೊರಗೆ ಕೂಡಿದ ಗುಮಾಸ್ತರ ತಂಡ ಮತ್ತೆ ಚದುರಿತು. ಸುಬ್ಬ ನೇರಾಗಿ ಆಫೀಸಿನ ತಲೆಬಾಗಿಲಿಗೆ ಬಂದು ಎಲ್ಲರಿಗೂ ಅಲ್ಲಿಂದಲೇ ನಮಸ್ಕರಿಸಿ ಹೊರಬಿದ್ದು ಹೋದ.

ಟಾಯಿಪು ಯಂತ್ರದ ಮೇಲೆ ಗದ್ದವನ್ನು ಆನಿಸಿಕೊಂಡು ಕುಳಿತ ವಾಸಂತಿಗೆ ತನ್ನ ಕತ್ತನ್ನು ಮೇಲಕ್ಕೆತ್ತುವ ಧೈರ್ಯವಾಗಲಿಲ್ಲ. ಅವಳ ಕಣ್ಣೊಳಗಿನ ಹನಿಗಳು ಮಾತ್ರ ಟಾಯಿಪ ಯಂತ್ರವನ್ನು ತೋಯಿಸಿ ಒದ್ದೆಮಾಡಿಬಿಟ್ಟಿತ್ತು.