ಪುಟ:Hosa belaku.pdf/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೦

ಕೆಳಗಿನ ನೆರಳು

ಸುಬ್ಬನಿಗೆ ಬೆಂಗಳೂರು ಹೊಸದು. ಆದರೂ ಅಲೆ ಅಲೆಯುತ್ತಾ ಬೆಂಗಳೂರಿಗೆ ಬಂದು ಒಂದು ವಾರ ಸಂದಿದೆ. ಬೆಂಗಳೂರು ಅವಾಢವ್ಯವಾಗಿ ಬೆಳೆದಿದ್ದರೂ, ಸ್ನೇಹ ಪರಿಚಯವೇನೂ ಇಲ್ಲದ ಸುಬ್ಬನಿಗೆ ನೌಕರಿ ಸಿಗಬೇಕೆಲ್ಲಿ? ತಾನು ಬೆಂಗಳೂರಿಗೆ ಬಂದು, ಅಲ್ಲಿ ಉದ್ಯೋಗವನ್ನು ಸಂಪಾದಿಸಿಕೊಂಡು, ವಾಸಂತಿಯನ್ನು ಕರೆಸಿ ಲಗ್ನ ಮಾಡಿ ಸುಖವಾಗಿರೋಣ ಎಂಬ ಕಲ್ಪನೆಯ ಕನಸಿನಲ್ಲಿ ಸುಬ್ಬ ಬೆಂಗಳೂರನ್ನು ಸೇರಿದ್ದ. ಆದರೆ ಇಂದು ಏಳು ದಿನಗಳಿಂದ ಅಲೆಯುತ್ತಿದ್ದ ಸುಬ್ಬನಿಗೆ ಬೆಂಗಳೂರಿನ ಕಹೀ ಅನುಭವ ಬಂದು ಹೋಗಿತ್ತು. ಬಸವನ ಗುಡಿ, ರಸೆಲ್ ಮಾರ್ಕೆಟ, ಮಲ್ಲೇಶ್ವರಂ, ಶ್ರೀರಾಮಪುರ, ಎಲ್ಲವನ್ನೂ ಕಾಲ್ನಡಿಗೆಯಲ್ಲಿಯೇ ಸುತ್ತು ಹಾಕಿದ್ದನು. ನೌಕರಿ ಎಲ್ಲಿಯೂ ಸಿಕ್ಕಿರಲಿಲ್ಲ. ಕ್ಯಾಂಟೋನಮೆಂಟಿನ ಬೀದಿಬೀದಿಯನ್ನು ಅಲೆದರೂ ಒಂದೇ ಉತ್ತರ ಸಿಕ್ಕಿತು. ಈ ೬ ದಿನಗಳಲ್ಲೂ ಕೂಡಿಸಿಟ್ಟ, ಚಿಕ್ಕ ಕೈಗಂಟು ತೀರಿ ಹೋಯಿತು. ಇಂದು ಅವನು ಒಂದು ದೃಢ ನಿರ್ಧಾರಕ್ಕೆ ಬಂದು ಬಿಟ್ಟ. ಉಲ್ಸೂರ ಕಡೆಗೆ ಕಾಲ್ನಡಿಗೆಯಿಂದಲೇ ನಡೆದ. ಮೈಮೇಲಿನ ಬಟ್ಟೆಗಳೆಲ್ಲ ಮಾಸಿವೆ. ತಲೆಯ ಕೂದಲು ಕೆದರಿ ಹೋಗಿವೆ. ಕ್ಯಾಂಟೋನಮೆಂಟಿನಲ್ಲಿ ಅವನೊಬ್ಬ ತಮಿಳು ಕೂಲಿಯವನಾಗಿ ಕಾಣತೊಡಗಿದ್ದ, ದಾರಿಯಲ್ಲಿ ಸಿಕ್ಕ ಜನ ಹಾಗೆ ತಿಳಿದು ಕೂಲಿಯನ್ನಾದರೂ ಕೇಳಿದರೆ ಅವರ ಕೂಲಿಯವನಾಗಲು ಸುಬ್ಬ ಈಗ ತಯಾರು ಆಗಿದ್ದ. ಆದರೆ ಬೆಂಗಳೂರಲ್ಲಿ ಕೂಲಿಯವರ ಸಂಖ್ಯೆಯು ಅತಿ ಮಿತಿಯಾಗಿ ಬೆಳೆದು ಬಿಟ್ಟಿತ್ತು. ಸುಬ್ಬ ಉಲ್ಸೂರ್ ಟ್ಯಾಂಕನ್ನು ಮುಟ್ಟಬೇಕಾದರೆ ಸಂಜೆ ೫-೫|| ಹೊಡೆದುಹೋಗಿತ್ತು. ಹೊಟ್ಟೆಯಲ್ಲಿ ಆಹಾರವಿಲ್ಲದ್ದರಿಂದ ಮೊದಲೇ ತುಂಬಾ ದಣಿವಾಗಿತ್ತು. ಬದಿಯ ಹುಲ್ಲಿನ ಮೇಲೆ ಹಾಯಾಗಿ ಒರಗಿದ. ದಣಿವಾಗಿದ್ದರಿಂದ ಒಂದು ಕಡೆ ತುಂಬಾ ನಿದ್ರೆ ಬರುತ್ತಿತ್ತು. ಆದರೆ ಬರೀ ಹೊಟ್ಟೆ ಆ ನಿದ್ರೆಯನ್ನು ಹೊಡೆದು ಹೊರಗೆ ಹಾಕುತ್ತಿತ್ತು. ಈ ದ್ವಂದ್ವದಲ್ಲಿ ಸುಬ್ಬ ಮಾತ್ರ ಗಾಸಿಯಾಗಿ ಬಿಟ್ಟಿದ್ದ. ಹಾಗೇ ಕಣ್ಣು ಮುಚ್ಚಿಕೊಂಡ. ಅವನ ಮನಸ್ಸು ಮಾತ್ರ ವಿಚಾರಿಸತೊಡಗಿತು.

“–ತಾನು ಬಾಲವಿಧವೆ ವಾಸಂತಿಗೆ ವಚನ ಕೊಟ್ಟು ಬಂದಿದ್ದಾನೆ. ಅದರಂತೆ ನಡೆಯದಿದ್ದರೆ ತಾನು ವಚನಭ್ರಷ್ಟ. ಇದೆಲ್ಲ ಅನಿಷ್ಟಕ್ಕೆ ಕಾರಣ