ಪುಟ:Hosa belaku.pdf/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೆಳಗಿನ ನೆರಳು

೩೫

ಸುಬ್ಬನ ಮೂಕವೃತ್ತಿ ಸಮ್ಮತಿಯನ್ನು ಸೂಚಿಸತೊಡಗಿತು. ಯುವಕ ಸುಬ್ಬನಿಗೆ ಒಳಬರಹೇಳಿದ.

ಖೋಲಿಯಲ್ಲಿ ಒಳಸೇರುವಾಗ ಆ ಹೆಣ್ಣು ಗೋಡೆಯ ಕಡೆಗೆ ಮಾರಿ ಮಾಡಿ ಮಂಚದ ಮೇಲೆ ಕುಳಿತಿದ್ದಳು. ಸುಬ್ಬ ಒಳಗೆ ಬಂದು ಮರದಲ್ಲಿಟ್ಟ ಕೂಸನ್ನು ನೋಡಿದ. ನಿಷ್ಕಪಟ ಶಿಶು ಸತ್ತು ಬಹಳ ಹೊತ್ತಾಗಿತ್ತು. ಸುಬ್ಬಣ್ಣ ಶಿಶುವನ್ನು ಕೈಯಲ್ಲೆತ್ತಿದ. ಇನ್ನು ಖೋಲಿಯಿಂದ ಹೊರಡುವದರಲ್ಲಿದ್ದು ಅಷ್ಟರಲ್ಲಿ ಆ ಹೆಣ್ಣು ಕೂಗಿತು. "ಒಮ್ಮೆ ಆ ಮಗುವಿನ ಮಾರಿ ನೋಡಿಕೊಳ್ತೇನೆ." ಸುಬ್ಬನು ತಿರುಗಿದ. ಆ ಹೆಣ್ಣ ಮುಖ ತಿರುಗಿಸಿದಳು. ಇಬ್ಬರೂ ಒಬ್ಬರನ್ನೊಬ್ಬರು ನೋಡಿದರು. ಆ ಕ್ಷಣವೇ ಆ ಹೆಣ್ಣು ಒಮ್ಮೆಲೆ ಕಿರುಚಿ ತನ್ನ ಮುಖವನ್ನು ಮುಚ್ಚಿಕೊಂಡಿತು.

"ಅಯ್ಯೋ, ಎಲ್ಲವೂ ಘಾತವಾಯಿತು."

ಯುವಕ ಒಮ್ಮೆಲೆ ಅವಳನ್ನು ತಬ್ಬಿ "ವನಜಾ, ವನಜಾಕ್ಷಿ, ಇದೇನ. ಒಮ್ಮೆಲೇ ಹೀಗೆ ಕಿರುಚಿಕೊಂಡೆ."

ವನಜಾಕ್ಷಿ ಮುಚ್ಚಿದ ಮುಖವನ್ನು ತೆಗೆಯಲಿಲ್ಲ ಸುಬ್ಬನೇ ಉತ್ತರಿಸಿದ: "ಧರ್ಮ ಮಾರ್ತಂಡ ಗೋಪಾಲಸ್ವಾಮಿಯವರ ಮಗಳು ವನಜಾಕ್ಷಿ, ತನ್ನ ತಂದೆಯ ಹೆಸರಿಗೆ ಕಲಂಕ ಹತ್ತಬಹುದೆಂದು ಅ೦ಜಿರಬಹುದು. ಇಲ್ಲಿಯವರೆಗೆ ಎಲ್ಲವೂ ಗುಪ್ತವಿದೆ. ನಾನೂ ಬಾಯಿ ಬಿಡಲಾರೆ, ನಾನು ಉಂಡು ಮನೆಯ ಗಳವನ್ನೆಣಿಸಲಾರೆ. ನಿಮ್ಮಿಂದ ೬೦೦ ರೂಪಾಯಿ ಇಸಿದುಕೊಂಡು ನಿಮ್ಮ ಪಾಪದಲ್ಲಿ ಈಗ ಪಾಲುಗಾರನಿದ್ದೆನೆ. ಎಲ್ಲಿಯೂ ಬಾಯಿ ಬಿಡಲಾರೆ"

ಸುಬ್ಬಣ್ಣ ಅಲ್ಲಿ ನಿಲ್ಲದೆ ಕೂಸಿನ ಹೆಣ ಚೀಲದಲ್ಲಿರಿಸಿ ಹೊರಗೆ ನಡೆದುಬಿಟ್ಟ.


ಚನ್ನಪಟ್ಟಣದ ರೇಶನಿಂಗ ಆಫೀಸಿನಲ್ಲಿ ಧರ್ಮಮಾರ್ತಂಡ ಗೋಪಾಲಸ್ವಾಮಿಯವರು ತಮ್ಮ ಎಲ್ಲ ಕಾರಕೂನರ ಎದುರಿನಲ್ಲಿ ಅಂದಿನ ತಾಯಿನಾಡು ದಿನಪತ್ರಿಕೆಯನ್ನು ಓದಿ ತೋರಿಸಹತ್ತಿದ್ದರು.