ಪುಟ:Hosa belaku.pdf/೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅರಿಕೆ.

ನನ್ನ ಮೊದಲ ಕಥಾಸಂಕಲನ "ಚಿನ್ನದ ಪದಕ" ಅಚ್ಚಾಗಿ ಒಂದು ವರುಷ ಸಂದಿದ ಮೇಲೆ ಇದೀಗ ಎರಡನೆಯ ಕಥಾಸಂಕಲನ "ಹೊಸ ಬೆಳಕು” ಬೆಳಕಿಗೆ ಬರುತ್ತಲಿದೆ. ಕತೆಗಳ ಮೊದಲು 'ಅರಿಕೆ' ಎಂದು ಹೇಳಿ ಪುಟಪುಟಗಳನ್ನು ತುಂಬಿ ಕೊಡುವದು ನನಗೆ ಸೇರದು. ನನ್ನ ಕಥೆಗಳ ಬಗ್ಗೆ ನಾನೇನು ಹೆಚ್ಚಿಗೆ ಹೇಳಲಾರೆ. ಆ ಕೆಲಸ ಸಹೃದಯ ವಾಚಕರದು, ನಿಸ್ಸಂಗ ಮನೋವೃತ್ತಿಯ ವಿಮರ್ಶಕರದು.

ಒಂದು ಮಾತನ್ನು ಹೇಳಬಹುದು. 'ಹೊಸ ಬೆಳಕಿ'ನಲ್ಲಿ ಕಾಣುವ ಕತೆಗಳೆಲ್ಲವೂ ಹೊಸ ರೀತಿಯಲ್ಲಿ ಮೂಡಿ ಬಂದಿದೆ. ಅನುಭವ ಹೆಚ್ಚಾದಂತೆ ಕತೆಗಳಲ್ಲಿ ಪರಿಪಕ್ವತೆ ಕಾಣಬರುತ್ತದೆ. ಲೇಖಕನ ಪ್ರತಿಭೆ ಹೂವಿನಷ್ಟು ಕೋಮಲವೆಲ್ಲ, ಕಬ್ಬಿಣದಷ್ಟು ಕಠಿಣ. ಸಾಂಸ್ಕೃತಿಕ ಹಿನ್ನೆಲೆ, ಶಿಕ್ಷಣದ ಪರಿಣಾಮ, ಜೀವನದಲ್ಲಿಯ ಸಿಹಿ ಕಹಿ ಅನುಭವ, ವಿವಿಧ ವಾಚನದ ಪರಿಣಾಮ, ಸಮಾಜದಲ್ಲಿಯ ಸ್ಥಿತ್ಯಂತರದ ಪರಿಣಾಮ ಇವೆಲ್ಲವುಗಳ ಮಿಶ್ರಣದ ಕಾವಿನಿಂದ ಲೇಖಕನ ಪ್ರತಿಭೆ ಕಾಯ್ದ ರಸವಾಗುತ್ತದೆ. ಆ ಎರಕದಿಂದಲೇ ಸುಂದರ ಕತೆಗಳ ನಿರ್ಮಾಣವಾಗುತ್ತದೆ. 'ಹೊಸ ಬೆಳಕಿ'ನಲ್ಲಿಯ ಕತೆಗಳಲ್ಲಿ ಅಂಥ ಮಿಶ್ರಣದ ಕೆಲವಂಶವಾದರೂ ಇದೆ ಎಂಬುದು ನನ್ನ ಮನವರಿಕೆ.

ಈ ಸಂಕಲನವನ್ನು ನನ್ನ ಗೆಳೆಯ ಶ್ರೀ. ಭಾಲಚಂದ್ರ ಘಾಣೇಕರರೇ ತಮ್ಮ ಮಾಲೆಯಲ್ಲಿ ಪೋಣಿಸಿ ಉಪಕಾರಮಾಡಿದ್ದಾರೆ. ಅವರಿಗೆ ನನ್ನ ಅನಂತ ವಂದನೆಗಳು.

ಶ್ರೀ. ಕವಿಭೂಷಣ ಬೆಟಗೇರಿ ಕೃಷ್ಣಶರ್ಮರು ತಮ್ಮ ಮಹತ್ವದ ಕೆಲಸಗಳನ್ನು ಬದಿಗಿರಿಸಿ ಈ ಕಥಾಸಂಗ್ರಹಕ್ಕೆ ಸುಂದರವಾದ ವಿಸ್ತ್ರತ ವಿಮರ್ಶಾತ್ಮಕ ಮುನ್ನುಡಿಯನ್ನು ಬರೆದುಕೊಟ್ಟು ತುಂಬಾ ಉಪಕಾರ ಮಾಡಿದ್ದಾರೆ. ಅವರಿಗೆ ನಾನೆಷ್ಟು ಕೃತಜ್ಞತೆಗಳನ್ನು ಸಲ್ಲಿಸಿದರೂ ಕಡಿಮೆಯೇ.

ದತ್ತ ಜಯಂತಿ,
೧೯೫೨
ಧಾರವಾಡ.

ವೆಂ. ಮು. ಜೋಶಿ.