ಪುಟ:Hosa belaku.pdf/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸಾಲ ಪರಿಹಾರ

೫೭

ಮೈ ಮೇಲೆ ಅರ್ಧ ಪರಿವೆಯೇ ಇರಲಿಲ್ಲ. ಮೇಲಾಗಿ ಮತ್ತೊಂದು ಬಾಟ್ಲಿಯ ಸುಖಸ್ವಪ್ನದಲ್ಲಿ ತಲ್ಲೀನನಾಗಿದ್ದ. ಇದರಿಂದ ಅವನ ಬಾಯಿಂದ ಮಾತು ಹೊರಡುವದಾದರೂ ಹೇಗೆ?

ಸೋಮನ ಮಾತೇ ಬೇರೆಯಾಗಿತ್ತು. ತನ್ನ ನಿರ್ಧಾರದ ವಿಚಾರವನ್ನೇ ಅವನು ಎಣಿಸುತ್ತಿದ್ದ. ಬಂದ ಸಂಕಟವನ್ನು ಮರೆಯುವದಕ್ಕಷ್ಟೇ ಸೆರೆ ಕುಡಿಯುವ ವಿಚಾರವನ್ನು ಮಾಡಿರಲಿಲ್ಲ. ಅದಕ್ಕೂ ಮುಂದಿನ ಮೆಟ್ಟಲನ್ನು ಏರಿದ್ದ. ಭರ್ತಿಯಾಗಿ ಸುರಾನಾನ ಮಾಡಿ, ಸರಿರಾತ್ರಿಗೆ ರಾಯರ ಪೂಜೆಯನ್ನು ಮುಗಿಸಬೇಕು ಎಂದು ಚಪಗೊಡಲಿಯನ್ನು ಆದಷ್ಟು ಸೆರೆ ಕುಡಿದನಂತರ ಮಸೆದಿಡಬೇಕು; ಎಂದು ಮನಸ್ಸಿನಲ್ಲಿ ವಿಚಾರಗಳನ್ನು ಮಸೆಯತೊಡಗಿದ್ದ. ಹಾದಿಯುದ್ದಕ್ಕೂ ಮತ್ತೆ ವಿಚಾರಗಳ ಗೊಂದಲವೇ. ತಾನು ಊರಲ್ಲಿ ಸಭ್ಯನೆಂದು ಪರಿಗಣಿಸಲ್ಪಟ್ಟಿದ್ದೇನೆ. ತಿಳಿಯುವ ವಯಸ್ಸಿನಿಂದ ಇಂದಿನವರೆಗೆ ರಾಯರ ಮನೆಯಲ್ಲಿ ಪ್ರಾಮಾಣಿಕತನದಿಂದ ದುಡಿದಿದ್ದೇನೆ. ಹೀಗಿದ್ದು ಇಂದು ಇಂಥ ಕಾರ್ಯಕ್ಕೆ ಕೈ ಹಾಕಬೇಕೇ ? ಇಂಥ ಕೆಲಸ ಮಾಡಿ ತನ್ನ ತಿಳಿಯಾದ ಪೂರ್ವ ಚಾರಿತ್ರ್ಯಕ್ಕೆ ರಾಡಿಯನ್ನೆಸೆದುಕೊಳ್ಳಬೇಕೆ, ಛೇ? ಇಲ್ಲ. ಆದರೆ ಸೇಡಿಗೆ ಸೇಡು ಬೇಕು. ನಾನು ಪ್ರಾಮಾಣಿಕನಾಗಿ ದುಡಿದಿದ್ದೇನೆ. ಅಷ್ಟೇ ಅಲ್ಲ ರಾಯರನ್ನು ಒಂದು ಸಲ ಉಳಿಸಿಯೂ ಇದ್ದೇನೆ. ಆವಾಗ--ಆ ವಕೀಲರ ಸೊಸೆ ಮನೆಗೆ ಬಂದಾಗ, ರಾಯರ ಆ ಹೊರಚಾಳಿಯು--ಥೂ, ಆ ಪ್ರಸಂಗದಲ್ಲಿಯೂ ನಾನು ಅವರ ಮಾನ ಹೋಗುವ ಪ್ರಸಂಗದಿಂದ ಅವರನ್ನು ಉಳಿಸಿದ್ದೇನೆ. ಇಷ್ಟೆಲ್ಲ ಇದ್ದೂ, ನನ್ನನ್ನು ಅವರು ಈಗ ಈ ಪರಿಸ್ಥಿತಿಗೆ ಇಳಿಸಬೇಕಂದ್ರೆ ? ಇಲ್ಲಿ, ಕೈಕೊಂಡ ಕೆಲಸದಲ್ಲಿ ಹಿಂಜರಿಯತಕ್ಕದ್ದಲ್ಲ. ಗಲ್ಲಿಗೆ ಹೋಗಬೇಕಾದೀತು ಅಷ್ಟೇನೇ ?

"ನೀಲೇಕಣಿ ಬಂತ್ರಿಯಪ್ಪಾ ? "

ಗಿಡ್ಡನ ಮಾತಿನಿಂದ ಸೋಮ ಎಚ್ಚರಗೊಂಡ, “ನಡೆ, ಊರಹೊರಗಿಂದನೇ ಗಡಂಗಕ್ಕೆ ಹೋಗೋಣ.” ಎಂದು ಗಿಡ್ಡನನ್ನು ಜತೆಯಲ್ಲಿ ಕರೆದುಕೊಂಡು ಸೋಮ ಮುಂದೆ ನಡೆದ. ಕತ್ತಲು ಕವಿದಿತ್ತು. ಅಮಾವಾಸ್ಯೆಯ ದಿನ. ಮನೆಮನೆಯಲ್ಲಿಯೂ ದೀಪದ ಬೆಳಕು ನಕ್ಷತ್ರಗಳಂತೆ ಮಿನುಗುತ್ತಿತ್ತು. ಗಡಂಗವು ಸನಿಯದಲ್ಲಿಯೇ ಇತ್ತು. ಗಡಂಗದಲ್ಲಿಯ ಗದ್ದಲ ಕರಗಿತ್ತು.