ಪುಟ:Hosa belaku.pdf/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೫೮

ಸಾಲ ಪರಿಹಾರ

ಗಡಂಗದ ಯಜಮಾನ ಮಿಣುಕು ದೀಪದ ಬೆಳಕಿನಲ್ಲಿ ದುಡ್ಡನ್ನೆಣಿಸುತ್ತಿದ್ದ. ಸೋಮ ಒಳಗ್ಹೋದವನೇ ಅತ್ತಿತ್ತ ನೋಡಿದ, ಕಳ್ಳತನದಿಂದ ಒಳನುಗ್ಗಿ, ಬೆಕ್ಕಿನಂತೆ ಕಣ್ಣು ಮುಚ್ಚಿ ಹಾಲು ಕುಡಿಯಬಹುದೇ? ತನ್ನನ್ನಾರಾದರೂ ನೋಡಿಯಾರಲ್ಲ ಎಂಬ ಭಯ ಬೇರೆ. ಆದರೆ ಗಿಡ್ಡ ನೇರವಾಗಿ ಗುತ್ತಿಗೆದಾರನ ಹತ್ತಿರ ಹೋಗಿ ತಾನೇ ದುಡ್ಡನ್ನು ಕೊಡುವವರ ಹಾಗೆ “ಎರಡು ಬಾಟ್ಲಿ ಭಟ್ರೇ” ಎಂದು ಕೂಗಿದ.

"ಭಟ್ರೇ" ಎಂಬ ಶಬ್ದಕ್ಕೆ ಸೋಮ ಬೆರಗಾಗಿ ಹೊರಳಿನೋಡಿ ನಿಜಕ್ಕೂ ಸ್ಥಂಭಿತನಾಗಿಯೇ ಬಿಟ್ಟ. ಎದೆ ಧಸ್ಸೆಂದಿತು. ಗಡಂಗದ ಮಾಲಿಕ ಮತ್ತಾರೂ ಆಗಿರಲಿಲ್ಲ. ರಾಯರ ಮಾವ. ಲಗ್ನದ ವರದಕ್ಷಿಣೆಗಾಗಿ ಆಸ್ತಿಪಾಸ್ತಿ ಕಳೆದುಕೊಂಡ ಮಾವ. ಹಣವಿಲ್ಲದವನ ಬಾಳು ಹೆಣದಕಿಂತ ಕಡೆ. ಮಾನವಿಲ್ಲದವನು ಮೃತಸಮಾನ. ಮೊದಲೇ ಹೆಣವಾಗಿದ್ದ ಭಟ್ರು ಈ ಉದ್ಯೋಗಕ್ಕೆ ಕೈ ಹಾಕಿದರೇನೋ? ಸೋಮನ ಮನಸ್ಸಿನಲ್ಲಿ ಸೇಡು ಬೃಹದ್ ಆಕಾರ ತಾಳತೊಡಗಿತ್ತು. ಸ್ವಂತ ಮಾವನನ್ನೇ ಈ ಪರಿಸ್ಥಿತಿಗೆ ತಂದಿರಿಸಿದ ರಾಯರು ತನ್ನನ್ನೂ......."

"ಬನ್ನಿ ಸಾಮೀ" ಗಿಡ್ಡ ಮೊದಲು ಬಾಟ್ಲಿ ಖಾಲಿ ಮಾಡಿ ಚೋಲಿ ಹೊಡೆಯುತ್ತ ಕೂಗಿದ. ಸೋಮ ಹತ್ತಿರ ಸರಿದು ಗಿಡ್ಡನತ್ತ ಲಕ್ಷ ಕೊಡಗೆ ಭಟ್ಟರಿಗೆ "ಶರಣ್ರಿ ಭಟ್ಟರೆ" ಎಂದ.

"ಯಾರು ಸೋಮಣ್ಣ ಏನು" ಎಂದು ಸಾಮೋಪಚಾರದ ನಗು ನಕ್ಕರು ಭಟ್ಟರು. ಆ ನಗು ಸೊಮನಿಗೆ ಕರ್ಕಶ ನಗುವಾಗಿ ತೋರಿತು. ಸೋಮನೇ ಪ್ರಶ್ನಿಸಿದ"

“ತಾವು ಈ ಕೆಲಸಕ್ಕೆ ಕೈ ಹಾಕಬೇಕೇ?”
"......" ಭಟ್ಟರ ಕಣ್ಣಲ್ಲಿ ನೀರು ಧಾರಾಕಾರವಾಗಿ ಹರಿಯ ಹತ್ತಿತು.
"ನಾಲ್ಕು ಮನೆ ಭಿಕ್ಷೆಗೆ ಹೋಗಿದ್ದರೆ ಹೊಟ್ಟೆ ತುಂಬ್ತಿತ್ತಲ್ಲ?"
"ನಾನೊಬ್ಬನೇ ಇದ್ದಿದ್ದರೆ ಆ ಭಿಕ್ಷೆ ಚಿಂತೇನೇ ಇರತಿರಲಿಲ್ಲ. ಅಂದೇ ಭಾಂವೀ ಬೀಳತಿದ್ದೆ."