ಪುಟ:Hosa belaku.pdf/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮುನ್ನುಡಿ.

ನಮ್ಮ ಜೀವನದಲ್ಲಿಯ ಯಾವುದೇ ಸಾಮಾನ್ಯ ಘಟನೆಯಿರಲಿ, ಹೇಳುವವನ ಚಾತುರ್ಯದಿಂದ ಅದೊಂದು ಸ್ವಾರಸ್ಯವಾದ ಕತೆಯಾಗಿ ರೂಪುಗೊಂಡು ನಿಲ್ಲಬಹುದು. ಒಂದು ವಿಶಿಷ್ಟ ಘಟನೆಯನ್ನು ಹಲವಾರು ಜನರು ಕಣ್ಣಾರೆ ಕಂಡಿರುವರು. ಆದರೆ ಆ ಘಟನೆಯಲ್ಲಿಯ ವೈಶಿಷ್ಟ್ಯವನ್ನು ಕಂಡುಹಿಡಿದು ಅದರ ಮೇಲೆ ಬೆಳಕು ಕೆಡಹಿ, ಅದರ ಬೆಳಕು ಹೆಚ್ಚಾಗಿ ತೋರುವಂತೆ ಕಂಡವರಿಗೆಲ್ಲ ಹೇಳಲಿಕ್ಕೆ ಸಾಧ್ಯವಿರುವುದಿಲ್ಲ. ಇದು ನಾಧ್ಯವಿದ್ದವನು ಖಂಡಿತವಾಗಿ ಕತೆಗಾರನಾಗಬಲ್ಲನು, ಸಾಮಾನ್ಯ ಘಟನೆಯನ್ನೂ ರಸವತ್ತಾಗಿ ಕತೆಮಾಡಿ ಹೇಳಬಲ್ಲ ಕತೆಗಾರ, ಜೀವನದಲ್ಲಿಯ ವೈಚಿತ್ರ್ಯಪೂರ್ಣ ಘಟನೆಗಳನ್ನು ಎಷ್ಟೊಂದು ಸುಂದರವಾದ ಕತೆಗಳನ್ನಾಗಿ ಹೇಳಲಾರ ? ಶ್ರೀಯುತ ವೆಂ. ಮು. ಜೋಶಿಯವರು ವಯಸ್ಸಿನಿಂದ ತರುಣರಾದರೂ ಅನೇಕ ಜನ ಹಿರಿಯರಿಗಿಂತ ಜೀವನದ ಕಹಿ ಸಿಹಿ ಅನುಭವಗಳನ್ನು ಹೆಚ್ಚಾಗಿ ಕಂಡವರಿದ್ದಾರೆ; ಉಂಡವರಿದ್ದಾರೆ.

ಕಳೆದ ಮಹಾ ಯುದ್ಧದಲ್ಲಿ ಸೈನಿಕರಾಗಿ ಕೆಲಸ ಮಾಡಿದ ಕತೆಗಾರ ಜೋಶಿಯವರು ಭಾರತದ ಅನೇಕ ಭಾಗಗಳನ್ನು ಸುತ್ತಿ ಅಲ್ಲಲ್ಲಿಯ ಪರಿಸ್ಥಿತಿಗಳನ್ನು ಕಣ್ಣಾರೆ ಕಂಡಿದ್ದಾರೆ. ಇಷ್ಟೇ ಅಲ್ಲ, ಪ್ರತ್ಯಕ್ಷ ಯುದ್ಧರಂಗದಲ್ಲಿ ಭಾಗವಹಿಸಿ ಬ್ರಹ್ಮದೇಶ ಮಲಯಾಗಳಲ್ಲಿ ಓಡಾಡಿ ಬಂದವರಾಗಿದ್ದಾರೆ. ಸ್ವಾಭಾವಿಕ ಸಾಹಿತ್ಯಪ್ರಿಯರಾದ ಶ್ರೀ. ಜೋಶಿಯವರು ನೋಡಿದುದನ್ನು ಬರಿ ಹೊರಗಣ್ಣಿಂದ ನೋಡಿ ಬಿಡದೆ, ಒಳಗಣ್ಣಿಂದ ನೋಡಿ ಮನದ ತೆರೆಯಮೇಲೆ ಮೂಡಿಸಿಕೊಂಡು ಬಿಟ್ಟಿದ್ದಾರೆ. ಆದುದರಿಂದಲೇ ಈ ಕತೆಗಾರರು ತಮ್ಮ ಕಥಾವಸ್ತುವಿಗೆ ಯಾವುದೇ ಭೌಗೋಲಿಕ ಹಿನ್ನೆಲೆಯನ್ನು ತೆಗೆದುಕೊಂಡರೂ ಅದನ್ನು ಯಥಾವತ್ತಾಗಿ ಚಿತ್ರಿಸಿ ತೋರಿಸಬಲ್ಲರು. ಅನೇಕ ಸಲ ಇವರ ಕತೆಗಳು ಪ್ರಾದೇಶಿಕ ಹಿನ್ನೆಲೆಯ ಚಿತ್ರಣದ ಮೂಲಕವಾಗಿಯೇ ವೈಶಿಷ್ಟ್ಯಪೂರ್ಣವಾಗಿ ತೋರಿ ವಾಚಕರ ಮನಸ್ಸನ್ನು ಕುತೂಹಲಗೊಳಿಸುವುವು.

ಈ ಕತೆಗಾರರು ಹೆಚ್ಚಾಗಿ ವಾಸ್ತವ ಮಾರ್ಗಾವಲಂಬಿಗಳು. ಎಂತಲೇ ತಮ್ಮ ಕತೆಗಳಿಗಾಗಿ ವಸ್ತುಗಳನ್ನು ಕಲ್ಪಿಸುತ್ತ ಕೂಡುವವರಲ್ಲ. ಜೀವನದಲ್ಲಿ