ಪುಟ:Hosa belaku.pdf/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸಾಲ ಪರಿಹಾರ

೬೧

ತಂದೆ ಮಗಳು ಕೂಡಿ ರಾಗಿ ಮುದ್ದೆಯನ್ನೆ ಊಟಮಾಡಿ ತಮ್ಮತಮ್ಮ ಹಾಸಿಗೆಯ ಮೇಲೆ ಒರಗಿದರು. ನಡುಮನೆಯಲ್ಲಿ ಹರಳೆಣ್ಣೆಯ ದೀಪ ಸಣ್ಣಾಗಿ ಮಿಣುಗುತ್ತಿತ್ತು. ತನ್ನ ಮನೆಯ ಪರಿಸ್ಥಿತಿಯನ್ನು ಆ ಮಿಣುಕು ಅಣಕವಾಡಿಸುವಂತೆ ಸೋಮನಿಗೆ ಗೋಚರಿಸಿತು. ಸೂರ್ಯ ಮುಳುಗಿದಾಗ ತನ್ನ ಜೀವನದಲ್ಲಿಯ ಮತ್ತೊಂದು ದಿನ ಪಾರಾಯಿತು ಎಂದು ಸಂತೋಷಪಟ್ಟ ಸೋಮನಿಗೆ ಈ ದೀಪದ ಬೆಳಕೂ ಸಹಿಸಲಸಾಧ್ಯವಾಯಿತು. ಎದ್ದು ದೀಪವನ್ನಾರಿಸಿದ. ಚಿನ್ನಿಗೆ ಕಂಡಿದ್ದು ಆ ಬತ್ತಿಯ ಹೊಗೆ ಮಾತ್ರ.

ಕೋಳಿ ಕೂಗಿದಾಕ್ಷಣ, ಚಿನ್ನಿ ಎದ್ದು ಅಡಿಗೆ ಮನೆಯ ಕೆಲಸಕ್ಕೆ ತೊಡಗಿದ್ದಳು. ಭಾಂಡಿಗಳನ್ನೆಲ್ಲ ತಿಕ್ಕಿ, ಮನೆ ಮುಂದಿನ ಅಂಗಳವನ್ನೆಲ್ಲ ಕಸಗುಡಿಸಿ ಎಮ್ಮೆ ತೊಳೆದು ಎರಡು ಎತ್ತಿಗೂ ಮೇವು ಹಾಕಿ, ಎಮ್ಮೆಯನ್ನು ಹಿಂಡಿ, ಒಲೆಯ ಮೇಲೆ ಗಂಜಿಗಿಟ್ಟು, ಹಾಲು ಕೊಡುವದಕ್ಕೆ ಹೊರಬಿದ್ದಳು. ಹಾಲುಕೊಟ್ಟು ತಿರುಗಿಬಂದರೂ ಮನೆಯಲ್ಲಿ ಅಪ್ಪ ಎದ್ದುದರ ಸುಳಿವೇ ಇಲ್ಲ. ಏನೋ ಮೈಯಲ್ಲಿ ಸ್ವಾಸ್ಥ್ಯವಿರಲಿಕ್ಕಿಲ್ಲವೆಂದು ಇಂದು ಮುಂಜಾನೆ ಅಪ್ಪ ಮಾಡುವ ಕೆಲಸವನ್ನು ತಾನೇ ಮಾಡಿದ್ದಳು. ಆದರೆ ೯ ಹೊಡೆದರೂ ಅಪ್ಪ ಎದ್ದಿರಲಿಲ್ಲ. ದಿನಾಲು ಇಷ್ಟು ಹೊತ್ತಿಗೆ ಎದ್ದು ಗಂಜೀ ಕುಡಿದು, ಗಳೇ ತೆಗೆದುಕೊಂಡು ಹೊಲಕ್ಕೆ ಹೊರಡುವವ ಇನ್ನೂ ಹಾಸಿಗೆಯ ಮೇಲೆಯೇ ಇದ್ದ. ಚಿನ್ನಿ ಅಪ್ಪನ ಹಾಸಿಗೆಯ ಬಳಿ ಹೋದಳು. ಸೋಮ ಹಾಸಿಗೆಯ ಮೇಲೆ ಬಡಬಡಿಸುತ್ತಿದ್ದ. ಚಿನ್ನಿಯ ಎದೆ ಧಸ್ಸೆಂದಿತು. ಹಾಗೆ ಕೆಲ ನಿಮಿಷ ಆಲಿಸಿದಳು:--

"......ಸಾsಲ...ನನ್ನ......ಚಿನ್ನಿ ಮದ್ವಿ......."

ಅಪ್ಪನನ್ನು ಕೈಮುಟ್ಟಿ ಚಿನ್ನಿ ಎಬ್ಬಿಸಹೋದಳು. ಸೋಮನ ಮೈಕಾದ ಕೆಂಡವಾಗಿತ್ತು. ಚಿನ್ನಿ ಮತ್ತೆ ನಡುಗಿದಳು. ಮೊದಲೇ ಸಾಲದ ಭಾರ, ಅಪ್ಪ ಜ್ವರದಿಂದ ಪೀಡಿತನಾಗಿ ಬಿಟ್ಟರೆ, ಔಷಧದ ವೆಚ್ಚಕ್ಕೆ ಎಲ್ಲಿಂದ ತರಬೇಕು ಎನ್ನುವ ಚಿಂತೆ ಅವಳಲ್ಲಿ ಮೂಡಿತು. ನಡುಗುವ ಕೈಗಳಿಂದಲೇ ಅಪ್ಪನನ್ನು ಎಬ್ಬಿಸಿದಳು.