ಪುಟ:Hosa belaku.pdf/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೬

ಮತಾ೦ತರ

ಶಬ್ದಗಳು ನನ್ನ ಕಿವಿಯಲ್ಲಿ ಪ್ರತಿಧ್ವನಿಯಾಗತೊಡಗಿದವು. ಘ೦ಟಿ ಹೊಡೆದ ಮೇಲೂ ಎಷ್ಟೋ ವೇಳೆಯವರೆಗೆ ಅದರ ಝಂಕಾರ ಕೇಳಬರುತ್ತದೆ. ಹಾಗೇ ಅದೇ ವಾಕ್ಯದ ಝಂಕಾರ ಪುನಃ ಪುನಃ ಕೇಳತೊಡಗಿತು.

"ಗುಣಯುತರ್ ಪಾಲುಂಡು ಮೇಲು೦ಬರೇ ?
ರಂಭಾ ನೃತ್ಯದಿ ಡೊಂಬರೇ?"

ನಾನು ನನ್ನಷ್ಟಕ್ಕೆ ನಾನೇ ನಕ್ಕೆ. ಹಳೆಯ ನಾಣ್ಣುಡಿಗಳು ಜನತೆಯ ಸಿಹಿ ಕಹಿ ಅನುಭವದ ಸಾರವಾಗಿದ್ದರೂ, ಅವುಗಳ ಅರ್ಥ ನಿತ್ಯನೂತನವೆಂದು ಈಗ ಒಪ್ಪಲು ಹಿಂಜರಿಯತೊಡಗಿತು. ಉದಾಹರಣಕ್ಕೆ ದೂರ ಹೋಗಲೇಬೇಕಿಲ್ಲ. ಕೋರ್ಟಿನಲ್ಲಿ ಇನ್ನು ಬರಬಹುದಾದ ಕೇಸು--

––ದೇಶಪಾಂಡೆ ನನ್ನ ಬಾಲಮಿತ್ರ. ತನ್ನ ಸುರೂಪ ಸುಂದರಿಯಾದ ಹೆಂಡತಿಯನ್ನು ಬಿಟ್ಟು, ಆ ಬೇರೆ ಹುಡುಗಿಯ ಜತೆಯಲ್ಲಿ ಪ್ರಣಯ ಬೆಳಿಸಬೇಕೇ? ಆ ಬೇರೆ ಹುಡಿಗೆ ಮತ್ತು ಅವನ ಹೆಂಡತಿ ಇಬ್ಬರನ್ನೂ ಸೌಂದರ್ಯ ಸ್ಪರ್ಧೆಗಾಗಿ ನಿಲ್ಲಿಸಿದರೆ--ರಂಭೆ ಡೊಂಬರು ಹೆಣ್ಣುಗಳನ್ನು ಸ್ಪರ್ಧೆಗೆ ನಿಲ್ಲಿಸಿದಷ್ಟು ಹಾಸ್ಯಾಸ್ಪದ.

ಹೀಗಿದ್ದೂ ಸೋಮೇಶ್ವರ "ಗುಣಯುತರ್ ಪಾಲುಂಡು ಮೇಲುಂಬರೆ ರಂಭಾ ನೃತ್ಯದಿ ಡೊಂಬರೇ...” ಎಂದು ಹೇಳುತ್ತಾನೆ.

ನನ್ನ ವಿಚಾರಸರಣಿ ಇನ್ನೂ ನಡೆಯುತ್ತಿರುವಾಗಲೇ, ಸೂರ್ಯ ಮುಳುಗಿ ಸಂಧಿ ಪ್ರಕಾಶವೂ ಮರೆಯಾಗತೊಡಗಿತ್ತು. ಮನೆಯ ಆಳು ಬಂದು ನಾನು ಕತ್ತಲಲ್ಲಿಯೇ ಕೂತದ್ದನ್ನು ಗಮನಿಸಿ ವಿದ್ಯುತ್ ದೀಪದ ಬಿರಡೆಯನ್ನು ಅದುಮಿದ. ನನ್ನ ಎದುರಿನಲ್ಲಿ ಇಳಿಬಿದ್ದ ದೀಪ ಪ್ರಕಾಶಮಾನವಾಯಿತು.

ದೀಪ ಹತ್ತಿದಾಕ್ಷಣ ಕೋಣೆಯ ಕತ್ತಲೆ ಮಾಯವಾಯಿತು. ನನ್ನ ವಿಚಾರಗಳ ತಾಕಲಾಟಗಳಿಗೂ ಹೊಸ ಬೆಳಕು ದೊರೆಯಿತು. ಆ ದೀಪ ಜೋತಾಡುತ್ತಿತ್ತು. ಆ ದೀಪದ ಕೆಳಗೆ..."

"...ಕೆಳಗೆ ಕತ್ತಲು" ಎಂದು ಸಂಪ್ರದಾಯ ಶರಣರ ತುಟಿ ಉತ್ತರ ಹೇಳಬಹುದಿತ್ತು.

ಆದರೆ ದೀಪದ ಕೆಳಗೆ ಕತ್ತಲವಿರಲಿಲ್ಲ. ತುಂಬ ಬೆಳಕು ಬಿದ್ದಿತ್ತು.