ಪುಟ:Hosa belaku.pdf/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೮

ಮತಾಂತರ

ಕಾಗದವೇ ಎಂದು ನನಗೆ ತುಂಬಾ ಆನಂದವಾಯಿತು. ಜಾನಪದ ಕತೆಯಲ್ಲಿ ನಾಯಕನಿಗೆ ರಾಕ್ಷಸನ ಪ್ರಾಣ ಎಲ್ಲಿದೆಯೆಂಬುದು ಅವನಿಗೆ ತಿಳಿದಾಗ....

ಅಂತೂ ಪಾಕೀಟಿನೊಳಗಿಂದ ಕಾಗದವನ್ನು ಹೊರತೆಗೆದು ಓದತೊಡಗಿದೆ. ಪತ್ರದ ಮೊದಲು ಮೂರು ಸಾಲುಗಳನ್ನೋದಿದಾಕ್ಷಣವೇ ಆಶ್ಚರ್ಯದ ಬುಗ್ಗೆಯೊಡೆಯಿತು. ವಿಚಾರಸಾಮ್ಯಗಳು ಮನುಷ್ಯನಿಗೆ ವಿಲಕ್ಷಣ ಆಶ್ಚರ್ಯ, ಆನಂದ ತಂದೊಡ್ಡುತ್ತವೆ.

ಹೆಂಡತಿ ಸಿಟ್ಟಾದುದು ಅದಕ್ಕಾಗಿಯೇ? ಎಂದೆ. ಪತ್ರ ದೇಶಪಾಂಡೆಯವರ ಪತ್ನಿ ನನ್ನವಳಿಗೆ ಬರೆದಿದ್ದಳು. ಅದು ಒಂದು ಪತ್ರವನ್ನೋದುವದಕ್ಕಿಂತಲೂ ಜ್ವಾಲಾಮುಖಿಯ ಸ್ಫೋಟ ಎನ್ನಬಹುದಿತ್ತು. ಗತಿಗಾಣದವನಾಗಿ ಓದತೊಡಗಿದೆ.

"ನನ್ನ ಪ್ರಾಣದ ಗೆಳತಿ, ಕಮಲಾಗೆ--

ವಂದನೆಗಳು, ನನ್ನ ಇವರು, ತಮ್ಮ ಆಫೀಸಿನಲ್ಲಿಯ ಹುಡುಗಿಯ ಜತೆಯಲ್ಲಿ ಲಗ್ನವಾಗುವ ಸುದ್ದಿಯನ್ನು ನೀನು ಈಗಾಗಲೇ ವೃತ್ತಪತ್ರಿಕೆಯಲ್ಲಿ ಓದಿರಬಹುದು.

ನನ್ನ ಜೀವನದಲ್ಲಿಯ ಆನಂದ ಇಂದಿಗೆ, ಇಲ್ಲಿಗೇ ಮುಗಿದ೦ತಾಯ್ತು. ನಾನು ಮಾಡಿದ ಪಾಪವೇನೆಂಬುದೇ ನನಗೆ ತಿಳಿಯದು.

ಇವರಿಂದ ನನಗೆ ದುಡ್ಡು ಬೇಕಾಗಿರಲಿಲ್ಲ. ಯಾವದಕ್ಕೂ ನಾನು ತೊಂದರೆ ಕೊಡಲಿಲ್ಲ. 'ಬೇಕು' ಎಂದಾಗ ಬೇಕಾದಷ್ಟನ್ನು ಕೊಡಲು, ನನ್ನ ತಂದೆ ಸಮರ್ಥರಿದ್ದರು, ಇದ್ದಾರೆ. ಇವರ ದುಡ್ಡಿನ ಆಸೆ ನನಗಿರಲಿಲ್ಲ.

ಬೇರೆಯವಳನ್ನು ಮದುವೆಯಾಗಿ ನನ್ನನ್ನು ಹಿಂಸಿಸಬೇಕೆಂಮ ಅವರು ಲೆಕ್ಕ ಹಾಕಿರಬಹುದು. ಆದರೆ?

ಆದರೆ ನಾನು ಮಲತಾಯಿಯ ಹಾಲನ್ನು ಕುಡಿದು ಬೆಳೆದಿಲ್ಲ. ಇನ್ನು ಸ್ತ್ರೀಯರು ಬಂಡು ಹೂಡಲೇ ಬೇಕು. ಪುಂಡರಂತೆ ಆಳುವ ಇಂಥ ಗಂಡಂದಿರನ್ನು ದಾರಿಗೆ ತರುವದಕ್ಕೆ––

ಇರಲಿ, ವಿಶೇಷ ಎಂದರೆ ನನ್ನ ತಂದೆ ಅವರ ಮೇಲೆ ಕೇಸನ್ನು ಹಾಕಿದ್ದಾರೆ. ದ್ವಿಭಾರ್ಯಾ ಪ್ರತಿಬಂಧಕ ಕಾಯ್ದೆಯ ಕೆಳಗೆ ಅವರು ಆರೋಪಿಗಳು. ನನ್ನ ತಂದೆಯವರು ಆ ಕೇಸನ್ನು ನಿನ್ನ ಯಜಮಾನರಿಗೆ ಒಪ್ಪಿಸಿ