ಪುಟ:Hosa belaku.pdf/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೭೨

ಮತಾಂತರ

ಊಟ ಅನಿವಾರ್ಯ. ಆ ಊಟದಲ್ಲಿ ಆನಂದ ಸೊಗಸುಗಳಿದ್ದರೆ ಅದಕ್ಕೆ ರುಚಿ ಹೆಚ್ಚು. ನನ್ನ ಮನೆಯಲ್ಲಿ ಆಳುಹೋಳುಗಳಿಗೆ ಕಡಿಮೆ ಇಲ್ಲ. ಆದರೆ ನನ್ನ ಎಲ್ಲ ಕೆಲಸಗಳನ್ನು ಆಳುಹೋಳುಗಳೇ ಮಾಡಿದರೆ? ಕೆಲಸಕ್ಕೆ ತೊಂದರೆಯಾಗುತ್ತಿರಲಿಲ್ಲ ನಿಜ, ಆದರೆ ಮನಸ್ಸಿಗೆ ಸಮಾಧಾನ ದೊರೆಯುತ್ತಿರಲಿಲ್ಲ. ನನ್ನ ಎದುರುಮನೆಯಲ್ಲಿಯ ಗೃಹಸ್ಥ ಆಫೀಸಿನಿಂದ ಮರಳಿ ಬಂದಾಕ್ಷಣ, ಅವನ ಹೆಂಡತಿ ಮುಗುಳುನಗೆ ನಕ್ಕು ಸ್ವಾಗತಿಸಿ, ನಾಲ್ಕು ನಗು ಮಾತುಗಳನ್ನಾಡಿ ಅವನಿಗೆ ಚಹ ತಂದು ಕೊಡುತ್ತಾಳೆ. ಅವನೇ ಭಾಗ್ಯವಂತ ಎಂದೆನಿಸುತ್ತದೆ. ಅವರಿಬ್ಬರೂ ಕೂಡಿ ತಿರುಗಾಡಲು ಹೊರಟರೆ, ನನಗೆ ಈ ಜನ್ಮದಲ್ಲಿಯೇ ಭಾಗ್ಯವಿಲ್ಲವೇ ಎಂದೆನಿಸಿಬಿಡುತ್ತದೆ.

ನನ್ನ ಹೆಂಡತಿ ಮನಸ್ಸು ಬಿಚ್ಚಿ ಮಾತನಾಡುವದಿಲ್ಲ. ನಾನು ಮನೆಗೆ ಬಂದಾಕ್ಷಣ, ಆಳುಮಗನೇ ಚಹ ತಂದು ಕೊಡಬೇಕು. ಅಡಗಿಯವಳೇ ಊಟಕ್ಕೆ ಹಾಕಬೇಕು. ತಿರಗಾಡುವದಕ್ಕೆ ನಾನೊಬ್ಬನೇ ಒಂಟಿಯಾಗಿ ಹೋಗಬೇಕು.

ನನ್ನ ವೃತ್ತಿ ಪೋಲೀಸನದು. ಆಫೀಸಿನಲ್ಲಿಯ ಎಲ್ಲ ಅವಧಿ ಕಠೋರ ವಾತಾವರಣದಲ್ಲಿ ನಡೆದು ಹೋಗುತ್ತದೆ. ಜಗತ್ತನ್ನೇ ಸುಟ್ಟು ಭಸ್ಮ ಮಾಡುತ್ತ ನಡೆದ ಭಸ್ಮಾಸುರನನ್ನು ಕೆಲಕಾಲವಾದರೂ ಆನಂದಪಡಿಸಬೇಕಾದರೆ ಮೋಹಿನಿ ಬೇಕಾದಳು--

ಇಲ್ಲಿ ನನ್ನ ಮೋಹಿನಿ? ಅವಳಲ್ಲಿ ರೂಪವಿದೆ, ಸೌಂದರ್ಯವಿದೆ. ಆದರೆ ಏನು ? ನಾನು ಕವಿಯಲ್ಲ. ಆದರೂ ಜಾನಪದ ಗೀತೆಯ ಒಂದು ನೆನಹು ಬಂದಿತು. ಅದನ್ನೇ ಹೇಳುತ್ತೇನೆ.

"ಕರಿಯ ಹೆಂಡತಿ ಎಂದು ಮರುಗಬೇಡ, ನೀರಲ ಹಣ್ಣು ಅತಿ ಕಪ್ಪು ಅದರಾಗ ರುಚಿ ಭಾಳ––"

"ಕೆಂಪು ಹೆಂಡತಿ ಎಂದು ಸಂತಸ ಪಡಬ್ಯಾಡ, ಅತ್ತಿಯ ಹಣ್ಣು ಬಲು ಕೆಂಪು ಅದರಾಗ ಹುಳ ಭಾಳ––"

ಈಗ ನಾನು ಮದುವೆಯಾದ ಹೆಣ್ಣು ಅಷ್ಟು ಸುಂದರಳಿಲ್ಲವೆಂದು ಈ ಸದ್ಯದ ಅವತರಣಿಕೆಯನ್ನು ಕೊಟ್ಟೆನೆಂದು ನಿನ್ನಲ್ಲಿಯ ವಕೀಲ ಬುದ್ಧಿ ಹೇಳಬಹುದು. ಆದರೆ ನಳಿನಿಯ ರೂಪ, ಕೇವಲ.....