ಪುಟ:Hosa belaku.pdf/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮತಾಂತರ

೭೩


............ಮಿಡಿನಾಗರ ಹಾವು, ಹೆಡೆ ತೆಗೆದು ಕುಣಿಯುವಾಗ ಎಷ್ಟು ಸುಂದರವಾಗಿ ತೋರುತ್ತದೆ?

ನಮ್ಮಿಬ್ಬರಲ್ಲಿಯ ಈ ಘರ್ಷಣೆ ಸುಮಾರಾಗಿ ನನ್ನ ಸಂಸಾರಕ್ಕೆ ಹೊಸ ಬಣ್ಣ ಬಳೆಯಿತು. ಅಭಿಮಾನದ ಬೀಜ ಮರವಾಗಿ ಬೆಳೆಯಿತು. ನಾನೂ ಗಂಡಸು, ಮೇಲಾಗಿ ಪೋಲೀಸ ಇನ್ಸಪೆಕ್ಟರು. ನನ್ನಲ್ಲಿಯ ಅಭಿಮಾನ--

ಪ್ರೇಮದಿಂದ ಪ್ರೇಮ ಬೆಳೆಯುತ್ತದೆ. ಅದರಂತೆ ಆಭಿಮಾನದಿಂದ ಅಭಿಮಾನ ಬೆಳೆಯುತ್ತದೆ. ಆ ಅಭಿಮಾನ ಅವಳಲ್ಲಿ ಅಹಂಕಾರಕ್ಕೆ ಎಡೆಮಾಡಿಕೊಟ್ಟಿತು.

ಕನ್ನಂಬಾಡಿಯ ಆಣೆಕಟ್ಟನ್ನು ನಾನೂ ನೀನೂ ಮೈಸೂರಿಗೆ ಹೋದಾಗ ನೋಡಲಿಕ್ಕೆ ಹೋಗಿದ್ದೆವು. ಆಗ ನಮ್ಮಿಬ್ಬರಲ್ಲಿ ನಡೆದ ಸಂಭಾಷಣೆ ನಿನಗೆ ಜ್ಞಾಪಕವಿದೆಯೇ ?

ನಾನು ಅಂದಿದ್ದೆ:

"ಕಾವೇರಮ್ಮ ಈ ಬದಿಯಲ್ಲಿ ಎಷ್ಟು ಸಿಟ್ಟಿಗೆದ್ದಿದ್ದಾಳೆ ನೋಡು.”
"ಅದು ಹೇಗೆ?"
"ಅವಳ ಮಾರ್ಗದಲ್ಲಿ ಅಡೆತಡೆ ಮಾಡಿದ್ದಕ್ಕಾಗಿ ಕೋಪಿಸಿಕೊಂಡಿದ್ದಾಳೆ"
"ಕೋಪಿಸಿಕೊಂಡಾದರೂ ಏನು ಪ್ರಯೋಜನ?"

"ಪ್ರಯೋಜನವೇಕಿಲ್ಲ, ನೋಡು ಕಾವೇರಮ್ಮ ತನ್ನೆ ಸಹಸ್ರಾರು ಕೈಗಳಿ೦ದ ಆಣೆಕಟ್ವಿಗೆ ಅಪ್ಪಳಿಸುತ್ತಿದ್ದಾಳೆ. ಆ ತೆರೆಗಳ ಭೋರ್ಗರೆಯುವ ಸಪ್ಪಳ ರುದ್ರತಾನದಂತೆ ಭಾಸವಾಗುತ್ತದೆ."

"ಆದರೆ ಆ ಬದಿ ನೋಡು. ಕಾವೇರಮ್ಮ ನಡುಹರೆಯದ ಸುಂದರ ತರುಣಿಯಂತೆ ಬಣ್ಣ ಬಣ್ಣದ ಸೀರೆಯುಟ್ಟು ನರ್ತನ ಮಾಡುತ್ತಿದ್ದಾಳೆ. ಕುಲುಕುಲು ನಗುತ್ತಿದ್ದಾಳೆ. ಆ ಮೊದಲಿನ ಸಿಟ್ಟು ಅಹಂಕಾರ ಎಲ್ಲಿಯೋ ಮಾಯವಾಗಿದೆ.”

“ಹೌದು. ಅದಕ್ಕೆ ಕಾರಣವೆಂದರೆ, ಹಾಕಿದ ಬಂಧನದಲ್ಲಿ ಹೊಸಮಾರ್ಗ ದೊರಕಿಸಿ ಮುಕ್ತಳಾಗಿದ್ದಾಳೆ. ಅದಕ್ಕೇ ಆ ನಲಿವು ಮತ್ತೆ ಕಾಣಿಸಿದೆ."