ಪುಟ:Hosa belaku.pdf/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವೈರಾಗ್ಯ-ವೈಯ್ಯಾರ.

ಅದೊಂದು ಚಿಕ್ಕ ಹಳ್ಳಿ. ಆ ಹಳ್ಳಿಯ ಹೆಸರು ಅಷ್ಟೊಂದು ಪ್ರಸಿದ್ಧಿ ಪಡೆಯದಿದ್ದರೂ, ಅಲ್ಲಿ ಕಂಡ ಒಂದು ವ್ಯಕ್ತಿ ಚಿತ್ರ ನನ್ನ ಕಣ್ಣ ಮುಂದೆ ಕಟ್ಟಿಬಿಟ್ಟಿದೆ. ಅದನ್ನು ಅಳುಕಿಸಲೆತ್ನಿಸಿದಷ್ಟೂ ಅದು ನಿಚ್ಚಳವಾಗಹತ್ತಿದೆ.

––ಚಂದನದ ಕಟ್ಟಿಗೆಯ ಮೇಲೆ ಕೊರೆದ ಚಿತ್ರವನ್ನು ಹಲವಾರು ಸಲ ಅರಿವೆಯಿಂದ ತಿಕ್ಕಿದರೆ? ಹೊಸ ಮೆರುಗು ಬಂದು, ಮೈ ನುಣುಪುಗೊಂಡು ನಿಚ್ಚಳವಾಗಿ ಕಾಣಿಸತೊಡಗುತ್ತದಲ್ಲವೇ?

ನಮ್ಮ ತಂದೆಯವರು ಕನ್ನಡ ಸಾಲೆಯ ಮಾಸ್ತರರು. ಆ ಹಳ್ಳಿಗೆ ಅಕಸ್ಮಾತ್ತಾಗಿ ವರ್ಗವಾಯಿತು. ನಮಗೆ ಇಂಥದೇ ಊರಿರಲಿಲ್ಲ. ವರ್ಗವಾಗಿ ಹೋದ ಊರನ್ನೇ ನಮ್ಮದೆಂದು ಭಾವಿಸಿ ಆ ಊರವರೇ ಆಗಿ ಬಿಡುತ್ತಿದ್ದೆವು. ಆ ಹಳ್ಳಿಗೆ ಹೋದಾಗ ನಾನು ೧೫ ವರುಷದ ಬುದ್ಧಿ ಬಲಿಯದ ಹುಡುಗನಾಗಿದ್ದೆ. ನಾನು ಆಗ ಕಲಿಯುತ್ತಿದ್ದುದು ಕನ್ನಡ ೭ನೇ ಇಯತ್ತೆಯಲ್ಲಿ. ಸಮಾಜದಲ್ಲಿ ಸೂಕ್ಷ್ಮವಾಗಿ ಏಳುತ್ತಿರುವ ಜ್ವಾಲಾಮುಖಿಗಳ ಜಳಕ್ಕೆ ನನ್ನ ತಲೆ ಕೊಂಚ ಕಾಯುತ್ತಿದ್ದರೂ ಅದರ ಬಗ್ಗೆ ನಾಲ್ಕು ಮಾತುಗಳನ್ನಾಡುವ ಅಧಿಕಾರ ನನಗಿರಲಿಲ್ಲ. ನನ್ನದು ಮರವೆಯ ಸ್ವಭಾವವಾಗಿದ್ದರೆ, ಅಂದು ನಡೆದದ್ದರ ಬಗ್ಗೆ ಪುನಃರ್ವಿಮರ್ಶಕೆಯ ಪ್ರಸ್ತಾಪ ನನ್ನ ಮನದಲ್ಲಿ ಈಗ ಏಳುತ್ತಿರಲಿಲ್ಲ.

ನಾವಿದ್ದ ಆ ಹಳ್ಳಿಯ ಹೊರಗೆ, 2-3 ಫರ್ಲಾಂಗುಗಳ ಮೇಲೆ ದೊಡ್ಡ ಹಳ್ಳ ಹರಿಯುತ್ತಿದೆ. ಹನ್ನೆರಡು ತಿಂಗಳ ಕಾಲ ನೀರಿಗೆ ಕೊರತೆ ಇಲ್ಲ. ಆ ಹಳ್ಳ ದಾಟಿದರೆ ಮತ್ತೊಂದು ಹಳ್ಳಿ. ಅದು ಬೆಳಗಾವಿ ಜಿಲ್ಲೆಗೆ ಸೇರಿದ್ದು. ಹಳ್ಳದ ಈ ಬದಿಗೆ ಧಾರವಾಡ ಜಿಲ್ಲೆ. ಆ ಹಳ್ಳವೇ ಒಂದು ಗಡಿಯಾಗಿತ್ತು. ಅಣ್ಣ ತಮ್ಮಂದಿರಲ್ಲಿಯ ಸಖ್ಯವೇ ಈ ಎರಡೂ ಹಳ್ಳಿಗಳ