ಪುಟ:Hosa belaku.pdf/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವೈರಾಗ್ಯ-ವೈಯಾರ

೭೭

ಲ್ಲಿತ್ತು. ಅಭಿಮಾನದ ಮಟ್ಟ ಮೇಲೇರಿದಾಗ ಹ್ಯಾಂವಕ್ಕೆ ಹ್ಯಾಂವ ಹತ್ತಿ ಬಡಿದಾಟವಾಗಿ ಅಘಟಿತ ಘಟನೆಗಳು ಕಾಣಿಸಿಕೊಳ್ಳುತ್ತಿದ್ದವು. ಕೆಲವು ಸಲ ಅಂಥ ಘಟನೆಗಳನ್ನು ಮರೆತು ಕೈಯಲ್ಲಿ ಕೈಯಿಕ್ಕಿ ಕೂಡಿ ಕೆಲಸ ಮಾಡಿದ ಸಂದರ್ಭಗಳೂ ನನ್ನ ಜ್ಞಾಪಕದಲ್ಲಿದೆ. ಅಂಥ ವೇಳೆಯಲ್ಲಿ ಕೆಲ ಸ್ವಾರ್ಥಸಾಧಕರು "ಎಷ್ಟs ಅಂದರೂ ಅಣ್ಣ ತಮ್ಮಂದಿರು ಕರಳು ಒಂದಂs. ನಾವೇನು ಹೊರಗಿನಿಂದ ಬಂದವರು" ಎಂದು ಮೂಗುಮುರಿಯುತ್ತ ಉಸುರುವ ಹೆಂಗಳೆಯರಂತೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಉದಾಸೀನರಾಗುತ್ತಿದ್ದರು ಅವರ ಉದಾಸೀನತೆಗೆ ಕಾರಣವೆಂದರೆ, ಇಬ್ಬರ ಜಗಳದಲ್ಲಿ ತಮ್ಮ ಬೇಳೆ ಬೇಯದಿರುವದು.

ನಾನೀಗ ಹೇಳ ಹೊರಟಿದ್ದು ಒಂದು ದೊಡ್ಡ ವ್ಯಕ್ತಿಯ ಕಥೆಯಲ್ಲ. ಪುಂಡರ ಪರಿಚಯವಲ್ಲ ಕಳ್ಳರ ಕಲಹವನ್ನಲ್ಲ ಸಾಮಾನ್ಯ ಜೀವಿಯೊಬ್ಬನ ಸ್ವಾರ್ಥರಹಿತ ಜೀವನ ನಡೆಸಿದ ಅಗಸರ ಗುಡದಪ್ಪನೇ ಆ ವ್ಯಕ್ತಿ. ಆ ಊರಿಗೆ ನಾವು ಹೊಸದಾಗಿ ಹೋದ ಮೊದಲನೇ ದಿನವೇ ನಮ್ಮ ಮನೆಯವರೆಗೆ ಬಂದು ಸ್ವ-ಪರಿಚಯ ಕೋರಿದವನೆಂದರೆ ಅಗಸರ ಗುಡದಪ್ಪನೇ.

"ಯಾವ ಮಾಸ್ತರ ಬಂದರೂ ನಾನು ಅವರ ಅರಬಿ ಒಗ್ಯಾಂವಾ. ಮೊದಲಿನ ಮಾಸ್ತರರು ತಿಂಗಳಾ ಎಂಟಾಣೆ ಕೊಡತಿದ್ರು. ನಿಮಗೆ ತಿಳಿದಟ ನೀವು ಕೊಡ್ರಿ" ಎಂದು ಹೇಳಿ, ಕೂಡಲು ಹೇಳದಿದ್ದರೂ ನಮ್ಮ ಮನೆ ಮುಂದಿನ ಕಟ್ಟೆಯಲ್ಲಿ ಗುಡದಪ್ಪ ಕುಳಿತುಬಿಟ್ಟನು.

ನಮ್ಮ ತಂದೆಯವರು ಮಾತನ್ನು ನಿಶ್ಚಯಿಸುವದಕ್ಕಾಗಿ ಅವನೊಡನೆ ಮಾತಿಗೆ ಮೊದಲು ಮಾಡಿದರು.

"ನೋಡು, ಮನ್ಯಾಗ ೫-೬ ಮಂದಿ ನಾವು. ಅವರೆಲ್ಲರ ಅರಿವಿನೂ ಒಗೀಬೇಕಾಗತೈತಿ, ಕಡಿಗೆ ತಕರಾರು ಮಾಡಬಾರದು ಮತ್ತ."

ಅದಕ್ಕೆ ಗುಡದಪ್ಪ ವಿನಂತಿಸುವ ಸ್ವರದಲ್ಲಿಯೇ "ಊರಾಗ ಒಗ್ಯಾಕಹತ್ತಿ ೮ ವರ್ಷ ಆತರಿ, ತಕರಾರು ಗಿಕರಾರು ಮಾತs ಕೇಳಬಾಡ್ರಿ” ಎಂದು ಹೇಳಿ ಮಾತು ಮುಗಿಸಿ ನಡೆದುಬಿಟ್ಟ.