ಪುಟ:Hosa belaku.pdf/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

iii

ಹೊಂದಿಕೆಯು ತೊಡಕು; ಬಡತನ-ಸಿರಿತನಗಳಲ್ಲಿಯ ಜಗಳಾಟ; ಅಧಿಕಾರ-ಅನಧಿಕಾರಗಳಲ್ಲಿಯ ಹೋರಾಟ. ಇವೇ ಮೂರು ಪ್ರಮುಖವಾದ ಪ್ರಶ್ನೆಗಳು ಎಲ್ಲೆಲ್ಲಿಯೂ ತಲೆಹೊರೆಯಾಗಿ ಕುಳಿತಿವೆ. ಹೆಣ್ಣು-ಗಂಡಿನ ತೊಡಕಿನ ಮೂಲಕ ವ್ಯಕ್ತಿ-ವ್ಯಕ್ತಿಗಳಲ್ಲಿ ಅತೃಪ್ತಿ ಹೆಚ್ಛತಲಿದೆ. ಬಡತನ-ಸಿರಿತನಗಳ ಕಾರಣಗಳ ಮೂಲಕ ಕುಟುಂಬ ಕುಟುಂಬಗಳಲ್ಲಿಯೂ ಆಶಾಂತಿ ತಲೆಯೆತ್ತಿದೆ, ಅಧಿಕಾರ-ಅನಧಿಕಾರಗಳ ಮೂಲಕ ರಾಷ್ಟ್ರ-ರಾಷ್ಟ್ರಗಳಲ್ಲಿ ದ್ವೇಷ- ಮತ್ಸರಗಳು ಹೆಚ್ಚುತ್ತಲಿವೆ. ವರ್ತಮಾನ ಸಾಹಿತ್ಯಿಕರ ಲಲಿತ ಸಾಹಿತ್ಯಕ್ಕಾಗಲಿ, ವಿಚಾರ ಸಾಹಿತ್ಯಕ್ಕಾಗಲಿ-ಇವೇ ಮೂರು ಸಮಸ್ಯೆಗಳೇ ಮುಖ್ಯ ವಿಷಯಗಳಾಗಿರುತ್ತವೆ.

ಇಲ್ಲಿಯ 'ಹೊಸ ಬೆಳಕು' 'ಮತಾಂತರ' 'ನಡುವಿನ ಪರದೆ' ಈ ಕಥೆಗಳಿಗೆ ಹೆಣ್ಣು-ಗಂಡಿನ ಸಮಸ್ಯೆ ವಸ್ತುಗಳನ್ನು ಒದಗಿಸಿಕೊಟ್ಟಿದ್ದರೆ, 'ಸಾಲ ಪರಿಹಾರ' 'ವಿಜ್ಞಾನದ ವಿಷ' 'ಕಾಲಮಹಿಮೆ' ಗಳಿಗೆ ಬಡತನ-ಸಿರಿತನದ ಸಮಸ್ಯೆ-ವಸ್ತುಗಳನ್ನು ಸಂಗ್ರಹಿಸಿ ಕೊಟ್ಟಿದೆ. 'ಕೆಳಗಿನ ನೆರಳು' 'ಹೊಗೆಯಿಂದ ಹೊರಗೆ' ಈ ಕತೆಗಳು ಅಧಿಕಾರ-ಅನಧಿಕಾರಗಳ ಹೋರಾಟದಿಂದ ಪ್ರಚೋದಿತವಾದವುಗಳು. 'ವೈರಾಗ್ಯ-ವೈಯ್ಯಾರ' ಎಂಬ ಕತೆಯು ಮನೋವಿಶ್ಲೇಷಣೆಯ ರಾಜ್ಯಕ್ಕೆ ಸೇರಿದುದು.

ಎಲ್ಲ ಕತೆಗಳಲ್ಲಿಯೂ ಶ್ರೀ. ಜೋಶಿಯವರು ಘಟನಾ ಚಮತ್ಕೃತಿಗಳಿಗೆ ವಿಶೇಷ ಲಕ್ಷ ಕೊಟ್ಟಿದ್ದಾರೆ. 'ಹೊಸ ಬೆಳಕು' 'ನಡುವಿನ ವರದೆ' ಈ ಕತೆಗಳಲ್ಲಿಯ ಸೌಂದರ್ಯವನ್ನು ನಾನು ಸಂಪೂರ್ಣವಾಗಿ ಮೆಚ್ಚಿದ್ದೇನೆ 'ಕೆಳಗಿನ ನೆರಳು' 'ಸಾಲ ಪರಿಹಾರ, 'ವಿಜ್ಞಾನದ ವಿಷ' ಕತೆಗಳ ಪ್ರಚಾರ ಚಾತುರ್ಯವನ್ನು ಮನವಾರೆ ಒಪ್ಪಿಕೊಂಡಿದ್ದೇನೆ.

ಶ್ರೀಮಾನ್ ಜೋಶಿಯವರ ಜೀವನದ ಅಭ್ಯಾಸ ಅನುಭವಗಳು ಇನ್ನೂ ಹೆಚ್ಚಾಗಲಿ; ಅವರ ಕತೆಗಳಿಂದ ಕನ್ನಡ ಸಾಹಿತ್ಯದೇವಿಯ ಶೃಂಗಾರದ ಸಂವರ್ಧನೆಯಾಗಲಿ.


ಜಯಂತಿ ಕಾರ್ಯಾಲಯ,
ಧಾರವಾಡ
ತಾ. ೧೬-೧೧-೧೯೫೨

ಬೆಟಗೇರಿ ಕೃಷ್ಣಶರ್ಮ.